ನವದೆಹಲಿ:ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ವಿರುದ್ಧ ಗಂಭೀರ ಆರೋಪ ಮಾಡಿರುವ ಮಾಜಿ ಮುಂಬೈ ಪೊಲೀಸ್ ಕಮಿಷನರ್ ಪರಂಬೀರ್ ಸಿಂಗ್ ಈ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಭ್ರಷ್ಟಾಚಾರದ ಆರೋಪ ಹೊತ್ತ ಹಾಲಿ ಸಚಿವರಾದ ದೇಶ್ಮುಖ್ ಅವರು ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಹಾಗೂ ಪ್ರಕರಣದಲ್ಲಿ ಪ್ರಭಾವ ಬೀರುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ತಕ್ಷಣ ಸಿಬಿಐ ನಿಷ್ಪಕ್ಷಪಾತ ಮತ್ತು ನ್ಯಾಯಯುತವಾಗಿ ತನಿಖೆ ನಡೆಸುವಂತೆ ಕೋರಿ ಪರಂಬೀರ್ ಸಿಂಗ್ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನ ಸಮರ್ಥಿಸಿಕೊಂಡ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್
ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಮಾಡುತ್ತಿಲ್ಲ ಎಂದು ಆರೋಪಿಸಿ 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಸಿಂಗ್ ಅವರನ್ನು ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ಇತ್ತೀಚೆಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿತ್ತು. ಹಾಗಾಗಿ ಇದನ್ನು ಕಾನೂನುಬಾಹಿರ ಎಂದು ಪರಿಗಣಿಸಿ ಈ ಆದೇಶವನ್ನು ರದ್ದುಪಡಿಸುವಂತೆ ಅವರು ಕೋರಿದ್ದಾರೆ.
ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸುವಂತೆ ಪ್ರಕರಣದದಲ್ಲಿ ಬಂಧಿತರಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಅನಿಲ್ ದೇಶ್ಮುಖ್ ಒತ್ತಡ ಹೇರಿದ್ದರು ಎಂದು ಆರೋಪಿಸಿ ಪರಂಬೀರ್ ಸಿಂಗ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.