ಹೈದರಾಬಾದ್: ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ (ಟಿಎಸ್ಪಿಎಸ್ಸಿ) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ಪತ್ತೆಗೆ ತನಿಖೆ ಚುರುಕುಗೊಂಡಿದೆ. ಈ ಹಿನ್ನೆಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಬ್ಬರು ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದಾರೆ ಎಂಬ ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.
ಟಿಎಸ್ಪಿಎಸ್ಸಿಯ ಇಬ್ಬರು ಅಧಿಕಾರಿಗಳನ್ನು ಬುಧವಾರ ಮತ್ತು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಸೂಚಿಸಿದೆ. ಬಿಗಿ ಭದ್ರತೆ, ಕಣ್ಗಾವಲಿನ ಮಧ್ಯೆ ಪತ್ರಿಕೆ ಸೋರಿಕೆ ಆಗಿರುವ ಹಿನ್ನೆಲೆ ಏಜೆನ್ಸಿ ಟಿಎಸ್ಪಿಎಸ್ಸಿ ಗೌಪ್ಯ ವಿಭಾಗದ ಅಧಿಕಾರಗಳಾದ ಶಂಕರ ಲಕ್ಷ್ಮಿ ಮತ್ತು ಮತ್ತೊಬ್ಬ ಅಧಿಕಾರಿ ಸತ್ಯನಾರಾಯಣ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಅಲ್ಲದೇ, ಏಜೆನ್ಸಿ ಈ ಪ್ರಕರಣದ ಕುರಿತು ಎಲ್ಲ ಮಾಹಿತಿಗಳನ್ನು ನೀಡುವಂತೆ ಹೈದರಾಬಾದ್ ಪೊಲೀಸ್ನ ವಿಶೇಷ ತನಿಖಾ ತಂಡ (ಎಸ್ಐಟಿ)ಗೆ ಸೂಚನೆ ನೀಡಿದೆ. ಈಗಾಗಲೇ ಈ ಪ್ರಕರಣದಲ್ಲಿ ಇಡಿ ಸಮನ್ಸ್ ಜಾರಿ ಮಾಡಿರುವ ಟಿಎಸ್ಪಿಎಸ್ಸಿಯ ಇಬ್ಬರು ಅಧಿಕಾರಿಗಳು ಸೇರಿದಂತೆ ಅನೇಕ ಮಂದಿಯನ್ನು ಎಸ್ಐಟಿ ಬಂಧಿಸಿದೆ.
ಎಸ್ಐಟಿ ತನಿಖೆ: ತನಿಖೆಯ ಭಾಗವಾಗಿ ಇಡಿ ಕೂಡ ಇದೀಗ ಬಂಧನದಲ್ಲಿರುವ ಇಬ್ಬರು ಅಧಿಕಾರಿಗಳ ವಿಚಾರಣೆ ನಡೆಸಲು ಮುಂದಾಗಿದ್ದು, ಈ ಸಂಬಂಧ ಕೋರ್ಟ್ಗೆ ಅವಕಾಶ ನೀಡುವಂತೆ ಕೋರಿದೆ. ಪೇಪರ್ ಸೋರಿಕೆ ಪ್ರಕರಣವು ಟಿಎಸ್ಪಿಎಸ್ಸಿ ಯಲ್ಲಿನ ಡೇಟಾ ಉಲ್ಲಂಘನೆಗೆ ಸಂಬಂಧಿಸಿದೆ. ಈ ಸಂಬಂಧ ಹೈದರಾಬಾದ್ ಪೊಲೀಸರ ವಿಶೇಷ ತನಿಖಾ ತಂಡವು ಈಗಾಗಲೇ ಟಿಎಸ್ಪಿಎಸ್ಸಿ ಅಧ್ಯಕ್ಷರ ಹೇಳಿಕೆಯನ್ನು ದಾಖಲಿಸಿದ್ದಾರೆ.
ಈ ಮುಂಚೆ, ತೆಲಂಗಾಣ ಉಚ್ಛ ನ್ಯಾಯಾಲಯ ಕೂಡ ಆಯೋಗದ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ತನಿಖೆಯ ವರದಿಯ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡುವಂತೆ ಎಸ್ಐಟಿಗೆ ಸೂಚಿಸಿತು. ಈ ಪ್ರಶ್ನಾ ಪತ್ರಿಕೆ ಸೋರಿಕೆಯ ವಿರುದ್ಧ ಅನೇಕರು ಕಾಳಜಿ ವ್ಯಕ್ತಪಡಿಸಿದ್ದು, ಉದ್ಯೋಗ ನಿರೀಕ್ಷೆಯಲ್ಲಿದ್ದ ಅನೇಕರಲ್ಲಿ ಕಳವಳಕ್ಕೆ ಕಾರಣವಾಗಿದೆ. ಈ ಸಂಬಂಧ ಈಗಾಗಲೇ ಎನ್ಎಸ್ಯುಐ ಸೇರಿದಂತೆ ಅನೇಕ ವಿದ್ಯಾರ್ಥಿಗಳ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿದೆ.