ಪನ್ನಾ (ಮಧ್ಯಪ್ರದೇಶ): ಇಲ್ಲಿನ ಜುಗಲ್ಕಿಶೋರ್ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಪೂಜೆಯ ವೇಳೆ ಪನ್ನಾ ರಾಜಮನೆತನದ ರಾಣಿ ಜಿತೇಶ್ವರಿ ದೇವಿಯು ಅನುಚಿತವಾಗಿ ವರ್ತಿಸಿದ್ದು, ಗದ್ದಲಕ್ಕೆ ಕಾರಣವಾಯಿತು. ನಂತರ ರಾಣಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಪೂಜೆ ನಡೆಸಲಾಗಿದೆ.
ಘಟನೆ ಏನು?: ಗುರುವಾರ ರಾತ್ರಿ 12 ಗಂಟೆ ಜುಗಲ್ಕಿಶೋರ್ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪೂಜೆ ನೆರವೇರಿಸಲಾಗಿತ್ತು. ಇದಕ್ಕೆ ಅಲ್ಲಿನ ರಾಜಮನೆತನದ ರಾಣಿ ಆಗಮಿಸಿದ್ದರು. ರಾಣಿ ಬಲವಂತವಾಗಿ ದೇವಾಲಯದ ಗರ್ಭಗುಡಿ ಪ್ರವೇಶಿಸಿ ಅರ್ಚಕರ ಕೈಯಿಂದ ಚಾಮರವನ್ನು ತೆಗೆದುಕೊಂಡು ತಾನು ಬೀಸುವುದಾಗಿ ಹೇಳಿದ್ದಾರೆ. ನಂತರ ಚಾಮರವನ್ನು ತಪ್ಪಾದ ರೀತಿಯಲ್ಲಿ ಬೀಸುತ್ತಿರುವುದನ್ನು ಕಂಡ ಭಕ್ತರು ಆಕ್ಷೇಪ ವ್ಯಕ್ತಪಡಿಸಿದರು. ರಾಣಿಯನ್ನು ಗರ್ಭಗುಡಿಯಿಂದ ಹೊರ ಕಳುಹಿಸುವಂತೆ ಭಕ್ತರಿಂದ ಒತ್ತಾಯ ಕೇಳಿಬಂದಿತ್ತು.
ಪೊಲೀಸರೊಂದಿಗೆ ಅನುಚಿತ ವರ್ತನೆ:ಈ ವೇಳೆ ರಾಣಿಯ ನಡೆ ಭಕ್ತರನ್ನು ಕೆರಳಿಸಿದೆ. ಇದಾದ ನಂತರ ದೇವಾಲಯದ ಅರ್ಚಕರು ಮತ್ತು ಇತರ ಜನರು ರಾಣಿ ಜಿತೇಶ್ವರಿಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅವರು ಹೆಚ್ಚು ಗಲಾಟೆ ಮಾಡಲು ಪ್ರಾರಂಭಿಸಿದ್ದಾರೆ. ರಾಣಿ ಒಪ್ಪದಿದ್ದಾಗ ಅರ್ಚಕ ಮತ್ತು ಇತರ ಜನರು ಸೇರಿ ಅವರನ್ನು ಗರ್ಭಗುಡಿಯಿಂದ ಹೊರ ಹಾಕಲು ಯತ್ನಿಸಿದರು. ಇಷ್ಟಾದ ಮೇಲೆಯೂ ರಾಣಿ ಹೆಚ್ಚು ಗಲಾಟೆ ಮಾಡಲಾರಂಭಿಸಿದರು. ಜನರು ಹೊರಕ್ಕೆ ಕಳುಹಿಸಲು ನೋಡಿದಾಗ ರಾಣಿ ಅಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಇದಾದ ಬಳಿಕ ಸ್ಥಳದಲ್ಲಿದ್ದ ಪೊಲೀಸರ ನೆರವಿನೊಂದಿಗೆ ದೇವಸ್ಥಾನದ ಸಿಬ್ಬಂದಿ ರಾಣಿಯನ್ನು ಗರ್ಭಗುಡಿಯಿಂದ ಹೊರಕ್ಕೆ ಕರೆದೊಯ್ದಿದ್ದಾರೆ. ಮಹಾರಾಣಿ ಕೂಡ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಸ್ಥಳದಲ್ಲಿದ್ದವರು ತಿಳಿಸಿದ್ದಾರೆ.