ಪನ್ನಾ (ಮಧ್ಯಪ್ರದೇಶ):ಮಧ್ಯಪ್ರದೇಶದ ಪನ್ನಾ ನಾಡು ವಿಶ್ವದಲ್ಲೇ ಅಮೂಲ್ಯ ವಜ್ರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಭೂಮಿಗೆ ಬಡವನನ್ನು ರಾಜನನ್ನಾಗಿ ಮಾಡುವಂತಹ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಸುನೀಲ್ ಕುಮಾರ್ ಮತ್ತು ಅವರ ಇತರ ಒಂಬತ್ತು ಜನ ಸಹಚರರು ಒಂದೇ ರಾತ್ರಿಯಲ್ಲಿ ಲಕ್ಷಾಧಿಪತಿಗಳಾಗಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ಸುನೀಲ್ ಕುಮಾರ್ ಹಾಗೂ ಅವರ 9 ಮಂದಿ ಸಹಚರರೊಂದಿಗೆ ಜರೂಪುರ್ ಖಾಸಗಿ ವಲಯದಲ್ಲಿ ವಜ್ರದ ಗಣಿ ಸ್ಥಾಪಿಸಿದ್ದರು.
ಇಂದು ಹೊಳೆಯುವ 7.90 ಕ್ಯಾರೆಟ್ ಗುಣಮಟ್ಟದ ವಜ್ರ ಅವರಿಗೆ ಲಭಿಸಿದೆ. ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ವಜ್ರ ಕಚೇರಿಯಲ್ಲಿ ಠೇವಣಿ ಇಟ್ಟಿದ್ದಾರೆ. ಮುಂಬರುವ ವಜ್ರದ ಹರಾಜಿನಲ್ಲಿ ಇದನ್ನು ಇಡಲಾಗುತ್ತದೆ. ಈ ವಜ್ರದ ಬೆಲೆ ಸುಮಾರು 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ವಜ್ರ ಕಚೇರಿಯ ಅಧಿಕಾರಿಯ ಪ್ರಕಾರ, "ಈ ವಜ್ರವನ್ನು ಹರಾಜಿನಲ್ಲಿ ಬಿಡ್ ಮಾಡಲಾಗುತ್ತದೆ. ನಂತರ, ತೆರಿಗೆಯನ್ನು ಕಡಿತಗೊಳಿಸಿದ ನಂತರ, ರೈತ ಮತ್ತು ಅವರ ಸಹಚರರಿಗೆ ಹಣವನ್ನು ಪಾವತಿಸಲಾಗುತ್ತದೆ'' ಎಂದು ಅವರು ತಿಳಿಸಿದರು. "ಇದು ನಮ್ಮೆಲ್ಲರ ಸಹೋದ್ಯೋಗಿಗಳ ಶ್ರಮ ಎಂದು ಹೇಳಿದ ರೈತ, ಆದರಿಂದ ಬಂದ ಹಣವನ್ನು ಎಲ್ಲ ಸಹೋದ್ಯೋಗಿಗಳಿಗೆ ಸಮಾನವಾಗಿ ಹಂಚಲಾಗುತ್ತದೆ. ಇದು ಈ ವರ್ಷದ ಮೊದಲ ದೊಡ್ಡ ವಜ್ರವಾಗಿದೆ'' ಎಂದು ಸುನೀಲ್ ಕುಮಾರ್ ಸಂತಸ ವ್ಯಕ್ತಪಡಿಸಿದರು.