ಪಲ್ನಾಡು(ಆಂಧ್ರಪ್ರದೇಶ):ಮಾಚರ್ಲ ತಾಲೂಕು ಪಂಚಾಯತ್ ಪ್ರಭಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ನೇತೃತ್ವದಲ್ಲಿ ಪುರಸಭೆ ಕಚೇರಿ ಬಳಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗುತ್ತಿತ್ತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಆಗಮಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಗಲಾಟೆ ಶುರುವಾಗಿದ್ದು, ಪರಸ್ಪರ ಕಲ್ಲು ತೂರಾಟ ಮತ್ತು ದೊಣ್ಣೆಗಳಿಂದ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.
ವೈಎಸ್‌ಆರ್‌ಸಿಪಿ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯ ಟಿಡಿಪಿ ಕಾರ್ಯಕರ್ತರ ಮೇಲೆ ಮೂರು ಗಂಟೆಗೂ ಹೆಚ್ಚು ಕಾಲ ಹಲ್ಲೆ ನಡೆಸಿದ್ದಾರೆ. ಪಲ್ನಾಡು ಜಿಲ್ಲೆಯ ಮಾಚರ್ಲ ಪಟ್ಟಣ ಹೊತ್ತಿ ಉರಿದಿದೆ. ಟಿಡಿಪಿ ಕ್ಷೇತ್ರದ ಉಸ್ತುವಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ಸೇರಿದಂತೆ ಮುಖಂಡರು, ಕಾರ್ಯಕರ್ತರು ಸಿಕ್ಕ ಸಿಕ್ಕವರನ್ನು ಥಳಿಸಿದ್ದಾರೆ. ಬ್ರಹ್ಮಾರೆಡ್ಡಿ ಅವರ ಮನೆ, ಪಕ್ಷದ ಕಚೇರಿ, ಮುಖಂಡರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಪರಿಸ್ಥಿತಿ ಉದ್ವಿಗ್ನವಾಗಿದ್ದು ಹೇಗೆ:ತಾ.ಪಂ. ಕ್ಷೇತ್ರದ ಉಸ್ತುವಾರಿ ಜೂಲಕಾಂತಿ ಬ್ರಹ್ಮಾರೆಡ್ಡಿ ನೇತೃತ್ವದಲ್ಲಿ ಶುಕ್ರವಾರ ಸಂಜೆ ಮಾಚರ್ಲ ರಿಂಗ್ ರಸ್ತೆಯಿಂದ ಪುರಸಭೆ ಕಚೇರಿ ಮುಂಭಾಗದ ಶಾಲೆಯವರೆಗೆ 'ಇದೇಂ ಕರ್ಮ ಮನ ರಾಷ್ಟ್ರಕಿ'(ನಮ್ಮ ರಾಜ್ಯಕ್ಕೆ ಇದೆಂಥ ಸ್ಥಿತಿ) ಎಂಬ ಘೋಷವಾಕ್ಯದಡಿ ಮೆರವಣಿಗೆ ಆಯೋಜಿಸಲಾಗಿತ್ತು. ಇದರಲ್ಲಿ ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ವಡ್ಡರ ಕಾಲೋನಿಯಿಂದ ವಿರೋಧ ಆರಂಭ:ಮುಖ್ಯರಸ್ತೆಯಿಂದ ಟಿಡಿಪಿ ರ್‍ಯಾಲಿ ವಡ್ಡರ ಕಾಲೋನಿ ಕಡೆಗೆ ಸಾಗುತ್ತದೆ. ಇಲ್ಲಿ ವೈಎಸ್‌ಆರ್‌ಸಿಪಿ ಮುಖಂಡರು ಹಾಗೂ ಕಾರ್ಯಕರ್ತರು ಸರ್ಕಾರದ ಎಲ್ಲ ಯೋಜನೆಗಳನ್ನು ಪಡೆಯುತ್ತಿದ್ದೇವೆ ಎಂದು ರ್‍ಯಾಲಿಯನ್ನು ವಿರೋಧಿಸಿದ್ದಾರೆ. ಮಾಚರ್ಲದ ಮಾಜಿ ಪುರಸಭೆ ಅಧ್ಯಕ್ಷ ಹಾಗೂ ಸ್ಥಳೀಯ ವೈ.ಎಸ್.ಆರ್.ಸಿ.ಪಿ ಪುರಸಭಾ ಸದಸ್ಯ ವಡ್ಡರ ಸಮಾಜದ ಮುಖಂಡ ತುರಕ ಕಿಶೋರ್ ನೇತೃತ್ವದಲ್ಲಿ ವಿರೋಧ ವ್ಯಕ್ತವಾಗಿದೆ.
ಅಲ್ಲದೇ ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಕಲ್ಲು, ದೊಣ್ಣೆ, ಮಾರಕಾಯುಧಗಳಿಂದ ಟಿಡಿಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ಕ್ಷೇತ್ರ ಉಸ್ತುವಾರಿ ಬ್ರಹ್ಮಾರೆಡ್ಡಿ ಅವರನ್ನು ತಳ್ಳಿದ್ದು ಅಲ್ಲದೇ ಹಲ್ಲೆ ಮಾಡಲು ಯತ್ನಿಸಲಾಯಿತು. ಈ ಸಮಯದಲ್ಲಿ ಟಿಡಿಪಿ ಕಾರ್ಯಕರ್ತರೂ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಕೆಲವು ವೈಎಸ್‌ಆರ್‌ಸಿಪಿ ಕಾರ್ಯಕರ್ತರು ಗಾಯಗೊಂಡರು. ಈ ವೇಳೆ ಪೊಲೀಸರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.