ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಇಟಾವಾ ಲಯನ್ ಸಫಾರಿ ಪಾರ್ಕ್ನಲ್ಲಿ ಸಿಂಹಿಣಿಯೊಂದು ಐದು ಮರಿಗಳು ಜನ್ಮ ನೀಡಿದೆ. ಈ ಪೈಕಿ ನಾಲ್ಕು ಮರಿಗಳು ಮೃತಪಟ್ಟಿವೆ. ಆದರೆ, ಇದೇ ಮೊದಲ ಬಾರಿ ಈ ಸಿಂಹಿಣಿ ಸುಮಾರು ಗಂಟೆಗಳ ಅಂತರದಲ್ಲಿ ಐದು ಮರಿಗಳಿಗೆ ಜನ್ಮ ನೀಡಿರುವುದು ವನ್ಯಜೀವಿ ಮತ್ತು ಅರಣ್ಯ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ. ಆದ್ದರಿಂದ ಈ ಸಿಂಹಿಣಿ ಬಗ್ಗೆ ಅಧ್ಯಯನ ಮಾಡಲು ಉತ್ತರ ಪ್ರದೇಶದ ಅರಣ್ಯ ಇಲಾಖೆ ಸಮಿತಿಯನ್ನು ರಚಿಸಿದೆ.
ಇಟಾವಾ ಲಯನ್ ಸಫಾರಿ ಪಾರ್ಕ್‌ನ 'ಸೋನಾ' ಎಂಬ ಸಿಂಹಿಣಿ ಜುಲೈ 6ರಿಂದ ಜು.10ರ ನಡುವೆ ಐದು ಮರಿಗಳಿಗೆ ಜನ್ಮ ನೀಡಿದೆ. ಜು.6ರಂದು ಮೊದಲಿಗೆ ಒಂದು ಮರಿಗೆ ಜನ್ಮ ನೀಡಿತ್ತು. ಇದಾದ 75 ಗಂಟೆಗಳ ನಂತರ ಸಿಂಹಿಣಿ ಮತ್ತೆ ಮೂರು ಮರಿಗಳಿಗೆ ಜನ್ಮ ಕೊಟ್ಟಿದೆ. ಅಲ್ಲದೇ, ಸುಮಾರು 24 ಗಂಟೆಗಳ ನಂತರ ಮತ್ತೊಂದು ಮರಿಗೆ ಜನ್ಮ ನೀಡಿದೆ. ಸಾಮಾನ್ಯವಾಗಿ ಸಿಂಹಿಣಿಗಳು 24 ರಿಂದ 30 ಗಂಟೆಗಳ ಒಳಗೆ ಎಲ್ಲ ಮರಿಗಳಿಗೆ ಜನ್ಮ ನೀಡುತ್ತವೆ. ಆದರೆ, ಈ ಹಲವು ಗಂಟೆಗಳ ಬಳಿಕ ಮರಿಗಳಿಗೆ ಜನ್ಮ ನೀಡಿರುವುದು ಇದೇ ಮೊದಲು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಯನ ಸಮಿತಿ ರಚನೆ: ಐದು ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿ 'ಸೋನಾ' ಕುರಿತು ಅಧ್ಯಯನ ಮಾಡಲು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಧೀರ್ ಕುಮಾರ್ ಶರ್ಮಾ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ ಅಭಿವೃದ್ಧಿ) ನೀರಜ್ ಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಪಶ್ಚಿಮ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಶೇಷ್ ನಾರಾಯಣ ಮಿಶ್ರಾ, ಇಟಾವಾ ಲಯನ್ ಸಫಾರಿ ಪಾರ್ಕ್‌ನ ನಿರ್ದೇಶಕಿ ದೀಕ್ಷಾ ಭಂಡಾರಿ ಮತ್ತು ಗೋರಖ್‌ಪುರ ಮೃಗಾಲಯದ ಪಶುವೈದ್ಯ ಡಾ. ಯೋಗೇಶ್ ಪ್ರತಾಪ್ ಸಿಂಗ್ ಈ ಸಮಿತಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ.
ಸಿಂಹಿಣಿ 'ಸೋನಾ' ಹೆರಿಗೆ ಸಮಯದಲ್ಲಿ ಲಭ್ಯವಿರುವ ವಿಡಿಯೋಗಳು, ಛಾಯಾಚಿತ್ರಗಳು ಮತ್ತು ಇತರ ದಾಖಲೆಗಳನ್ನು ಅಧ್ಯಯನ ಮಾಡಿದ ನಂತರ ಸಮಿತಿಯು ತನ್ನ ವರದಿಯನ್ನು ಸಿದ್ಧಪಡಿಸಲಿದೆ. ಜೊತೆಗೆ ಪ್ರಮುಖವಾಗಿ ಗುಜರಾತ್ ಮತ್ತು ಡೆಹ್ರಾಡೂನ್ ಭಾರತೀಯ ವನ್ಯಜೀವಿ ಸಂಸ್ಥೆಯ ಇತರ ತಜ್ಞರನ್ನು ಸಂಪರ್ಕಿಸಿ ಅವರ ಅಭಿಪ್ರಾಯವನ್ನು ಪಡೆಯುವ ಮೂಲಕ ವರದಿಯನ್ನು ತಯಾರಿಸಲಿದೆ. ಜುಲೈ ಅಂತ್ಯದೊಳಗೆ ವರದಿ ಸಲ್ಲಿಸಲು ಸಮಿತಿಗೆ ಕಾಲಾವಕಾಶ ನೀಡಲಾಗಿದೆ.