ಲಂಡನ್: ಪಂಡೋರಾ ಪೇಪರ್ಸ್ ಸೋರಿಕೆ ಪ್ರಕರಣದಲ್ಲಿ ವಿಶ್ವದ ಹಲವು ಶ್ರೀಮಂತರ ಹಣಕಾಸು ಗುಟ್ಟು ರಟ್ಟಾಗಿದೆ. ಭಾರತ ಸೇರಿದಂತೆ 91 ರಾಷ್ಟ್ರಗಳ ಪ್ರಮುಖ ವ್ಯಕ್ತಿಗಳಿಗೆ ಸಂಬಂಧಿಸಿದ ರಹಸ್ಯ ವಿವರಗಳು ಇದರಲ್ಲಿವೆ.
ಅನೇಕ ದೇಶಗಳ ಹಾಲಿ ಮತ್ತು ಮಾಜಿ ಮುಖಂಡರು, ರಾಜಕಾರಣಿಗಳು, ಸೆಲೆಬ್ರಿಟಿಗಳು, ಧಾರ್ಮಿಕ ಮುಖಂಡರು, ಡ್ರಗ್ ಡೀಲರ್‌ಗಳು ಹಾಗೂ ಅಧಿಕಾರಿಗಳು ಹೊರರಾಷ್ಟ್ರಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ಮಾಹಿತಿ ಇದೆ. ಅಷ್ಟೇ ಅಲ್ಲದೆ, ಪಂಡೋರಾ ಪೇಪರ್ಸ್ ಸೋರಿಕೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಆಪ್ತರ ಹೆಸರು ಕೂಡಾ ಕಾಣಿಸಿಕೊಂಡಿದೆ.
ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಬಿಡುಗಡೆ ಮಾಡಿದ ವರದಿಯ ತನಿಖೆಯಲ್ಲಿ ಬಿಬಿಸಿ ಮತ್ತು ವಾಷಿಂಗ್ಟನ್ ಪೋಸ್ಟ್, ದಿ ಇಂಡಿಯನ್ ಎಕ್ಸ್‌ಪ್ರೆಸ್, ದಿ ಗಾರ್ಡಿಯನ್ ಸೇರಿದಂತೆ 150 ಮಾಧ್ಯಮಗಳ ಸುಮಾರು ಸುಮಾರು 600 ಪತ್ರಕರ್ತರು ಭಾಗಿಯಾಗಿದ್ದಾರೆ.
ಸೋರಿಕೆಯಾಗಿರುವ 11.9 ದಶಲಕ್ಷ ದಾಖಲೆಗಳ ಪೈಕಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಹೆಸರಾಂತ ಪಾಪ್ ಮ್ಯೂಸಿಕ್ ತಾರೆ ಶಕೀರಾ, ಸೂಪರ್ ಮಾಡೆಲ್ ಕ್ಲೌಡಿಯಾ ಸೇರಿದಂತೆ ಅನೇಕ ಜಾಗತಿಕ ಸೆಲೆಬ್ರಿಟಿಗಳ ಹೆಸರಿದೆ. ಸುಮಾರು 35 ಅಂತಾರಾಷ್ಟ್ರೀಯ ನಾಯಕರ ಆರ್ಥಿಕ ಮಾಹಿತಿಗಳು ಇದರಲ್ಲಿವೆ. ದೇಶಗಳ ಹಾಲಿ ಪ್ರಧಾನ ಮಂತ್ರಿ, ಅಧ್ಯಕ್ಷರುಗಳು ಹಾಗೂ ವಿವಿಧ ದೇಶಗಳ ಮುಖ್ಯಸ್ಥರು, ಸಚಿವರುಗಳು, ನ್ಯಾಯಾಧೀಶರು, ಮೇಯರ್‌ಗಳು ಹಾಗೂ ಮಿಲಿಟರಿ ಜನರಲ್‌ಗಳು ಸೇರಿ 90ಕ್ಕೂ ಅಧಿಕ ದೇಶಗಳ 300 ಕ್ಕೂ ಅಧಿಕ ಸಾರ್ವಜನಿಕ ಅಧಿಕಾರಿಗಳ ಆರ್ಥಿಕ ಮಾಹಿತಿಯ ವಿವರ ತನಿಖಾ ವರದಿಯಲ್ಲಿದೆ.
ICIJ ನೀಡಿರುವ ಹೇಳಿಕೆ ಅನ್ವಯ, ಜೋರ್ಡಾನ್ ರಾಜ, ಉಕ್ರೇನ್, ಕೀನ್ಯಾ ಮತ್ತು ಈಕ್ವೆಡಾರ್ ಅಧ್ಯಕ್ಷರು, ಜೆಕ್ ಗಣರಾಜ್ಯದ ಪ್ರಧಾನಿ, ಯುಕೆ ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರ ವಿದೇಶಿ ವಹಿವಾಟುಗಳನ್ನು ಬಹಿರಂಗಪಡಿಸಲಿದೆ ಎಂದಿದೆ.