ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವ ಕಲ್ಪನೆಯನ್ನು ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸಿ.ರಾಜಗೋಪಾಲಾಚಾರಿ, ರಾಜೇಂದ್ರ ಪ್ರಸಾದ್ ಮತ್ತು ಬಿಆರ್ ಅಂಬೇಡ್ಕರ್ ವಿರೋಧಿಸಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಇಂದು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಮಸೂದೆ - 2023ರ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸತ್ತಿನ ಕಲಾಪ ಇದರ ಕಾರಣ ದೆಹಲಿಯ ಅಧಿಸೂಚನೆ ಹೊರಡಿಸಲಾಗಿತ್ತು. ಈಗ ಮಸೂದೆಯನ್ನು ಮಂಡಿಸಲಾಗಿದೆ. ಯಾವುದೇ ವಿಧೇಯಕ ಹಾಗೂ ಕಾನೂನನ್ನು ರಾಜಕೀಯ ಕಾರಣ ಹಾಗೂ ರಾಜಕೀಯ ಮೈತ್ರಿಗಾಗಿ ವಿರೋಧಿಸುವುದು ಅಥವಾ ಸಮರ್ಥನೆ ಮಾಡುವುದು ಸರಿಯಲ್ಲ ಎಂದರು.
ಹೊಸ ಘಟಬಂಧನ್ಗಳನ್ನು ಮಾಡಲು ಅನೇಕ ಪ್ರಕಾರಗಳು ಇವೆ. ವಿಧೇಯಕ ಹಾಗೂ ಕಾನೂನು ದೇಶದ ಬಲಕ್ಕಾಗಿ ಇರುತ್ತದೆ. ಇದರ ವಿರೋಧ, ಸಮರ್ಥನೆಯನ್ನು ದೇಶದ ಬಲಕ್ಕಾಗಿ ಮಾಡಬೇಕು. ಆದರೆ, ದೆಹಲಿ ಏನಾದರೂ ಆಗಲಿ, ಭ್ರಷ್ಟಾಚಾರ ಎಷ್ಟಾದರೂ ಆಗಲಿ, ಮಂತ್ರಿ ಏನಾದರೂ ಮಾಡಲಿ, ಮುಖ್ಯಮಂತ್ರಿ ಕೋಟ್ಯಂತರ ರೂಪಾಯಿ ಬಂಗಲೆ ಮಾಡಲಿ. ಘಟಬಂಧನ್ಗಾಗಿ ಸಮರ್ಥನೆ ಮಾಡುವ ಯೋಜನೆ ಸೂಕ್ತವಲ್ಲ ಎಂದು ಹೇಳಿದರು.
ದೆಹಲಿ ಬಗ್ಗೆ ಪ್ರತಿಪಕ್ಷದ ಸದಸ್ಯರು ಆಲೋಚನೆ ಮಾಡಿ. ಮೈತ್ರಿಕೂಟದ ಬಗ್ಗೆ ಯೋಚನೆ ಮಾಡಬೇಡಿ. ಮೈತ್ರಿಕೂಟದಿಂದ ಉಪಯೋಗವಾಗಲ್ಲ. ಮೈತ್ರಿಕೂಟದ ನಂತರವೂ ನರೇಂದ್ರ ಮೋದಿ ಪೂರ್ಣಬಹುಮತದೊಂದಿಗೆ ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿದ್ದಾರೆ. ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ನಿಮಗೂ ಜನತೆ ಅವಕಾಶ ನೀಡಿದ್ದರು. ಆದರೆ, 10 ವರ್ಷ ಯುಪಿಎ ಆಡಳಿತ ಮಾಡಿ 12 ಲಕ್ಷ ಕೋಟಿ ಹಗರಣಗಳನ್ನು ಮಾಡಿತ್ತು. ಇದೇ ಕಾರಣಕ್ಕೆ ಇಂದು ಪ್ರತಿಪಕ್ಷದಲ್ಲಿ ಕುಳಿತಿದ್ದೀರಿ. ಈ ಬಿಲ್ ವಿಷಯ ಇತ್ಯರ್ಥವಾದ ಬಳಿಕವೂ ಅವರು (ಆಮ್ ಆದ್ಮಿ ಪಕ್ಷ) ನಿಮ್ಮ ಜೊತೆಗೆ ಬರುವುದಿಲ್ಲ ಎಂದು ನಾನು ವಿಶೇಷವಾಗಿ ಕಾಂಗ್ರೆಸ್ನವರಿಗೆ ತಿಳಿಸಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದರು.