ಪಾಲಿ (ರಾಜಸ್ಥಾನ):ಕೋವಿಡ್-19 ಎರಡನೇ ಅಲೆ ದೇಶಾದ್ಯಂತ ಹಲವಾರು ಜನರನ್ನು ಸಂಕಷ್ಟಕ್ಕೆ ದೂಡಿದೆ. ವೇಗವಾಗಿ ಹಬ್ಬುತ್ತಿರುವ ಸೋಂಕಿನ ಮಧ್ಯೆ ವೈದ್ಯಕೀಯ ಸಾಮಗ್ರಿಗಳ ಕೊರತೆ ಎದುರಾಗಿದೆ.
ನರಳಾಡುತ್ತಿದ್ದ ಯುವಕನಿಗೆ ತನ್ನ ಬೆಡ್ ಬಿಟ್ಟುಕೊಟ್ಟ ವೃದ್ಧೆ ಎಷ್ಟೋ ಜನ ಸರಿಯಾದ ಸಮಯಕ್ಕೆ ಬೆಡ್ ಸಿಗದೆ ಮೃತಪಡುತ್ತಿದ್ದಾರೆ. ರಾಜಸ್ಥಾನದ ಪಾಲಿಯಲ್ಲಿ ಹೀಗೆ ಬೆಡ್ ಇಲ್ಲದೇ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯುವಕನ ಪಾಲಿಗೆ ಓರ್ವ ವೃದ್ಧೆ ಜೀವದಾತೆಯಾಗಿದ್ದಾರೆ.
ಪಾಲಿಯಲ್ಲಿ ವೃದ್ಧೆವೋರ್ವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ರೋಹ್ತ್ ಪ್ರದೇಶದ ಭಾವ್ರಿ ಗ್ರಾಮದ ನಿವಾಸಿ ಲೆಹರ್ ಕನ್ವಾರ್ ಎಂಬ ವೃದ್ಧೆಯನ್ನು ಅವರ ಪತಿ ಭನ್ವರ್ ಸಿಂಗ್ ಬಂಗಾರ್ ಆಸ್ಪತ್ರೆಯ ಕೊರೊನಾ ಒಪಿಡಿಗೆ ಕರೆತಂದಿದ್ದರು. ಆದರೆ ಬೆಡ್ ಸಿಗದೆ ಪರಿತಪಿಸುತ್ತಿದ್ದರು. ಒಪಿಡಿಯಲ್ಲಿಯೇ ಮಹಿಳೆಗೆ ಆಮ್ಲಜನಕವನ್ನು ಒದಗಿಸಲಾಯಿತು. ಕೆಲ ಹೊತ್ತಿನ ಬಳಿಕ ಅವರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯಿತು.
ಇದನ್ನೂ ಓದಿ:ದೇಶದಲ್ಲಿ ಒಂದೇ ದಿನ 4 ಸಾವಿರ ಮಂದಿ ಕೋವಿಡ್ಗೆ ಬಲಿ.. 4 ಲಕ್ಷ ಸೋಂಕಿತರು ಪತ್ತೆ
ಆದರೆ ಅದೇ ಸಮಯಕ್ಕೆ ಅಲ್ಲೋರ್ವ ಯುವಕ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದನ್ನು ವೃದ್ಧೆ ಕಂಡರು. ಚೆಂಡಾ ನಿವಾಸಿ 40 ವರ್ಷದ ಬಾಬುಲಾಲ್ ಅವರು ತಮ್ಮ ಮಗ ಉದಯರಾಮ್ನನ್ನು ಆಸ್ಪತ್ರೆಗೆ ಕರೆತಂದಿದ್ದರು. ಯುವಕನ ಸ್ಥಿತಿ ತುಂಬಾ ಗಂಭೀರವಾಗಿತ್ತು ಮತ್ತು ತಕ್ಷಣವೇ ಆಮ್ಲಜನಕ ಮತ್ತು ಹಾಸಿಗೆಯ ಅಗತ್ಯತೆ ಇತ್ತು. ಆದರೆ ಆ ಯುವಕನಿಗೆ ಬೆಡ್ ದೊರೆಯದೆ ಆತನ ತಂದೆ ಪರಿತಪಿಸುತ್ತಿದ್ದರು. ಈ ವೇಳೆ ವೃದ್ಧೆ ಲೆಹರ್ ಕನ್ವಾರ್ ತಮ್ಮ ಹಾಸಿಗೆಯನ್ನು ಯುವಕನಿಗೆ ಮಂಜೂರು ಮಾಡಲು ಹೇಳಿದರು.
‘ಜೀವನದಲ್ಲಿ ನಾನು ಬದುಕಿದ್ದು ಆಗಿದೆ. ನನಗಿಂತ ಈ ಯುವಕನಿಗೆ ಬೆಡ್ ಅವಶ್ಯಕ’ ಎಂದು ಹೇಳಿದ ಮಹಿಳೆಯ ಮಾತು ಅಲ್ಲಿದ್ದವರ ಹೃದಯಕ್ಕೆ ಮುಟ್ಟಿತ್ತು. ಮಾನವೀಯತೆ ಅಂದರೆ ಇದೆ ಅಲ್ಲವೇ. ಸಾವಿನ ಕದ ತಟ್ಟುತ್ತಿರುವಾಗಲೂ ಪರೋಪಕಾರ ಮಾಡುವ ಗುಣ ಎಲ್ಲದಕ್ಕಿಂತಲೂ ಮಿಗಿಲಾದದ್ದು.
ಆದರೆ ಈ ಇಬ್ಬರಿಗೂ ಇನ್ನೂ ಕೋವಿಡ್ ಸೋಂಕು ತಗುಲಿರುವ ಬಗ್ಗೆ ದೃಢಪಟ್ಟಿಲ್ಲ ಎಂದು ತಿಳಿದುಬಂದಿದೆ.