ಚೆನ್ನೈ: ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾವೇರಿ ವಿಚಾರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ್ದಾರೆ. ತಮ್ಮ ಕುಟುಂಬ ಸದಸ್ಯರು ಕರ್ನಾಟಕದಲ್ಲಿ ನಡೆಸುತ್ತಿರುವ ವ್ಯವಹಾರಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಡಿಎಂಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸುತ್ತಿದೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿರುವ ಪಳನಿಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕೈಗೊಂಬೆ ಸಿಎಂ ಆಗಿರುವ ಸ್ಟಾಲಿನ್ಗೆ ದೂರದೃಷ್ಟಿಯೇ ಇಲ್ಲ. ಜೂನ್ 12 ರಿಂದಲೇ ಸೇಲಂನ ಮೆಟ್ಟೂರು ಅಣೆಕಟ್ಟಿನಿಂದ ಸಿಎಂ ನೀರು ಬಿಡುಗಡೆ ಮಾಡಿದ್ದಾರೆ. ಸರ್ಕಾರದ ಭರವಸೆಯನ್ನು ನಂಬಿ ಕಾವೇರಿ ಅಚ್ಚುಕಟ್ಟು ಪ್ರದೇಶದ ಸುಮಾರು 1.50 ಲಕ್ಷ ರೈತರು 5 ಲಕ್ಷ ಎಕರೆ ಭೂಮಿಯಲ್ಲಿ ಅಲ್ಪಾವಧಿಯ 'ಕುರುವೈ' ಬೆಳೆಯನ್ನು ಬೆಳೆದಿದ್ದಾರೆ. ಆದರೆ ಈಗ 3.50 ಲಕ್ಷ ಎಕರೆಯಲ್ಲಿನ ಬೆಳೆಗಳು ಒಣಗುತ್ತಿವೆ ಮತ್ತು ಉಳಿದವುಗಳನ್ನು ಬಾವಿ ನೀರಿನ ನೀರಾವರಿಯಿಂದ ಉಳಿಸಿಕೊಳ್ಳಲಾಗುತ್ತಿದೆ ಎಂದು ಪಳನಿಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷ ಆಡಳಿತ ನಡೆಸಲು ಬಾರದ ಸರ್ಕಾರ ಇನ್ನೇನು ಮಾಡುತ್ತದೆ? ಮೆಟ್ಟೂರು ಅಣೆಕಟ್ಟಿನಿಂದ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ, ಕಾನೂನಿನ ಪ್ರಕಾರ ಮತ್ತು ರಾಜಕೀಯ ಒತ್ತಡದ ಮೂಲಕ ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರಿನ ಪಾಲನ್ನು ಖಚಿತಪಡಿಸಿಕೊಳ್ಳಬೇಕಿತ್ತು ಎಂದು ಅವರು ಹೇಳಿದರು.