ಸಾಂಬಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್‌ಎಫ್ ಯೋಧರು ಪಾಕಿಸ್ತಾನಿ ಮಾದಕ ವಸ್ತು ಕಳ್ಳಸಾಗಣೆದಾರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಸೋಮವಾರ ತಡರಾತ್ರಿ ರಾಮ್‌ಗಢ ಸೆಕ್ಟರ್‌ನ ಎಸ್‌ಎಂಪುರ ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ವ್ಯಕ್ತಿಯೋರ್ವನ ಚಲನವಲನಗಳನ್ನು ಗಮನಿಸಿದ ಗಡಿ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿನ ಗಡಿಯಲ್ಲಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ವ್ಯಕ್ತಿಗೆ ಗಡಿ ಭದ್ರತಾ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಈ ವೇಳೆ ಬಿಎಸ್‌ಎಫ್ ಗುಂಡಿನೇಟಿಗೆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈತನಿಂದ ಸುಮಾರು 4 ಕೆಜಿ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಗಡಿ ನುಸುಳುತ್ತಿದ್ದ ಇಬ್ಬರ ಹತ್ಯೆಗೈದಿದ್ದ ಸೇನಾಪಡೆ :ಜುಲೈ 17ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಗ್ಗಲು ಯತ್ನಿಸಿದ ಇಬ್ಬರನ್ನು ಕೊಲ್ಲಲಾಗಿತ್ತು ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದರು. ಗಡಿಯಲ್ಲಿ ಇಬ್ಬರು ನುಸುಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹತ್ಯೆ ಮಾಡಿದ್ದರು. ಪೂಂಚ್ ಸೆಕ್ಟರ್‌ನಲ್ಲಿ ಆಪರೇಷನ್ ಬಹದ್ದೂರ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.