ಅಹಮದಾಬಾದ್ (ಗುಜರಾತ್):ಬಿಎಸ್‌ಎಫ್ ಯೋಧರು ಪಾಕಿಸ್ತಾನಿ ಒಳನುಸುಳುಕೋರನನ್ನು ಬಂಧಿಸಿದ್ದಾರೆ. ಆರೋಪಿ ಗಡಿಯಲ್ಲಿ ಅಳವಡಿಸಲಾಗಿದ್ದ ತಂತಿ ಬೇಲಿ ದಾಟಿ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಗಡಿಯಲ್ಲಿ ಎಚ್ಚರಿಕೆವಹಿಸಿ ಗಸ್ತು ತಿರುಗುತ್ತಿದ್ದ ಬಿಎಸ್ಎಫ್ ಸಿಬ್ಬಂದಿ ತಕ್ಷಣ ಆತನನ್ನು ಸೆರೆ ಹಿಡಿದಿದ್ದಾರೆ. ಬಿಒಪಿ ಬಳಿಯ ಗೇಟ್ನಿಂದ ಕೆಳಗಿಳಿದ ಕೂಡಲೇ ಸಿಕ್ಕಿಬಿದ್ದಿದ್ದಾನೆ. ಪಾಕಿಸ್ತಾನದ ನಗರ್‌ಪಾರ್ಕರ್‌ನ ನಿವಾಸಿ ದಯಾರಾಮ್ ಎಂದು ಆತನನ್ನು ಗುರುತಿಸಲಾಗಿದೆ. ಆರೋಪಿಯ ಬಂಧನವನ್ನು ಬಿಎಸ್ಎಫ್ ಬುಧವಾರ ಖಚಿತಪಡಿಸಿದೆ.
ಮಂಗಳವಾರ ಗುಜರಾತ್‌ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟುತ್ತಿದ್ದಾಗ ಪಾಕಿಸ್ತಾನಿ ನುಸುಳುಕೋರ ಗಡಿ ಭದ್ರತಾ ಪಡೆಗೆ ಸಿಕ್ಕಿಬಿದ್ದಿದ್ದಾನೆ. ಬನಸ್ಕಾಂತದಿಂದ ನಾದೇಶ್ವರಿ ಬಳಿ ಗೇಟಿನಿಂದ ಇಳಿಯುತ್ತಿದ್ದ ಆತನನ್ನು ಕೂಡಲೇ ಬಂಧಿಸಲಾಯಿತು ಎಂದು ಬಿಎಸ್‌ಎಫ್ ತಿಳಿಸಿದೆ.
ಭದ್ರತಾ ಪಡೆಗಳಿಂದ ಶಸ್ತ್ರಾಸ್ತ್ರ, ಮದ್ದುಗುಂಡು ವಶ:ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು, ತಹಸಿಲ್ ಖಾರಿಯ ದೂರದ ಬೆಟ್ಟ ಮತ್ತು ಅರಣ್ಯ ಪ್ರದೇಶದಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಭಯೋತ್ಪಾದನೆ ಸಂಬಂಧಿತ ಸಾಮಗ್ರಿಗಳನ್ನು ವಶಪಡಿಸಿಕೊಂಡಿವೆ. ಸಂಜೆಯವರೆಗೂ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯ ಪ್ರದೇಶದಲ್ಲಿ ಶಂಕಿತ ಅಡಗುತಾಣಗಳ ಶೋಧ ನಡೆಸಲಾಗಿತ್ತು. ಅಡಗುತಾಣದಿಂದ ಪೊಲೀಸರು 7.62 ಎಂಎಂನ 256 ಕಾರ್ಟ್ರಿಡ್ಜ್‌ಗಳು, 7.62 ಎಂಎಂನ 36 ಖಾಲಿ ಕಾರ್ಟ್ರಿಡ್ಜ್‌ಗಳು, ಎಕೆ-47ನ 5 ಮ್ಯಾಗಜೀನ್‌ಗಳು ಮತ್ತು 9 ಎಂಎಂನ 34 ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಬನಿಹಾಲ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.
ಇದನ್ನೂ ಓದಿ:ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿಗೆ ಕೊಲೆ ಬೆದರಿಕೆ..!