ಪೋರಬಂದರ್(ಗುಜರಾತ್):ಪಾಕಿಸ್ತಾನ ಜೈಲಿನಲ್ಲಿರುವ 80 ಭಾರತೀಯ ಮೀನುಗಾರರನ್ನು ಪಾಕ್ ಸರ್ಕಾರ ನವೆಂಬರ್ 9 ರಂದು ಬಿಡುಗಡೆ ಮಾಡಲಿದೆ. ನಿಮಗೆ ತಿಳಿದಿರುವಂತೆ ಪಾಕಿಸ್ತಾನದ ಕಡಲ ಭದ್ರತಾ ಪಡೆಯು ಭಾರತೀಯ ಮೀನುಗಾರರನ್ನು ಆಗಾಗ ಬಂಧಿಸುತ್ತದೆ. 2021- 22 ಹಾಗೂ 2019ರ ಸಮಯದಲ್ಲಿ ಪಾಕ್ನ ಕಡಲ ಭದ್ರತಾ ಪಡೆಗೆ ಭಾರತೀಯ ಮೀನುಗಾರರನ್ನು ಸಿಕ್ಕಿಬಿದ್ದಿದ್ದರು. ಇದೀಗ ಆ ಮೀನುಗಾರರು ಬಿಡುಗಡೆಯಾಗಲಿದ್ದಾರೆ ಎಂಬ ಸಂದೇಶ ಭಾರತ-ಪಾಕಿಸ್ತಾನ ಪ್ರಜಾಪ್ರಭುತ್ವ ಮತ್ತು ಶಾಂತಿ ವೇದಿಕೆಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಜೀವನ್‌ಭಾಯ್ ಜಂಗಿ ಅವರಿಗೆ ಬಂದಿದೆ. ಯಾರೆಲ್ಲ ಮೀನುಗಾರರು ತಾಯ್ನಾಡಿಗೆ ಮರಳಲಿದ್ದಾರೆ ಎಂಬುದು ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಈ ಕುರಿತು ಜೀವನ್ ಜಂಗಿ ಮಾತನಾಡಿ, "ಭಾರತೀಯ ಮೀನುಗಾರರ ಕುಟುಂಬಗಳಿಗೆ ಸಂತಸದ ಸುದ್ದಿಯಿದೆ. ಪಾಕಿಸ್ತಾನದ ಜೈಲಿನಲ್ಲಿರುವ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಸರ್ಕಾರ ನವೆಂಬರ್ 9 ರಂದು ಬಿಡುಗಡೆ ಮಾಡಲಿದೆ. ಮುಂದಿನ ನವೆಂಬರ್ 09 ರಂದು, 80 ಭಾರತೀಯ ಮೀನುಗಾರರು ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗುತ್ತಾರೆ. ಅವರೆಲ್ಲ ಇನ್ನೇನು ವಾಘಾ ಗಡಿಯನ್ನು ತಲುಪಲಿದ್ದಾರೆ. ಮತ್ತು ನವೆಂಬರ್ 12 ರಂದು ಅವರು ತಮ್ಮ ತಾಯ್ನಾಡು ವೆರಾವಲ್ ತಲುಪುತ್ತಾರೆ" ಎಂದು ತಿಳಿಸಿದ್ದಾರೆ.
ಪಾಕ್ ಜೈಲಿನಲ್ಲಿ ಬಂಧಿಯಾಗಿದ್ದಾರೆ ಒಟ್ಟು 173 ಭಾ.ಮೀನುಗಾರರು: 80 ಭಾರತೀಯ ಮೀನುಗಾರರನ್ನು ಪಾಕ್ ಸರ್ಕಾರ ಬಿಡುಗಡೆ ಮಾಡಲಿದೆ. ಆದರೆ, ಅಂದಾಜು 173 ಮೀನುಗಾರರು ಇನ್ನೂ ಪಾಕಿಸ್ತಾನದ ಜೈಲುಗಳಲ್ಲಿ ಬಂಧಿಯಾಗಿದ್ದಾರೆ. ಅವರನ್ನು ಆದಷ್ಟು ಬೇಗ ಬಿಡುಗಡೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದೀಗ ಬಿಡುಗಡೆ ಮಾಡುತ್ತಿರುವ ಸುದ್ದಿ ತಿಳಿದಿರುವ ಭಾರತೀಯ ಮೀನುಗಾರರ ಕುಟುಂಬಗಳಲ್ಲಿ ಸಂತಸದ ಅಲೆ ಎದ್ದಿದೆ. ಇದಕ್ಕೂ ಮುನ್ನ 199, ನಂತರ 200 ಮತ್ತು ಈಗ 80 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡುತ್ತಿದೆ.
ಭಾರತದ ಜೈಲಲ್ಲಿ 83 ಪಾಕ್ ಮೀನುಗಾರರು, ಬಿಡುಗಡೆಗೆ ಮನವಿ:ಪ್ರಪಂಚದೆಲ್ಲೆಡೆ ದೀಪಾವಳಿ ಹಬ್ಬದ ವಾತಾವರಣ ಕಳೆಗಟ್ಟುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ ಭಾರತೀಯ ಮೀನುಗಾರರು ಬಿಡುಗಡೆಯಾಗುತ್ತಿದ್ದು, ಮೀನುಗಾರರ ಕುಟುಂಬಗಳು ಸಂಭ್ರಮಿಸುತ್ತಿದೆ. ಈ ಬಾರಿಯಾದರೂ ದೀಪಾವಳಿ ಹಬ್ಬಕ್ಕೆ ಅಣ್ಣ, ಮಗ, ಗಂಡ ಭಾಗಿಯಾಗುತ್ತಾರೆ ಎಂಬ ಆಸೆಯಲ್ಲಿ ದಿನ ಕಳೆಯುತ್ತಿದ್ದಾರೆ. ಇವರ ಮನೆಯ ಪರಿಸ್ಥಿತಿ ಹೇಗಿರುತ್ತದೆ ಎಂಬುದು ನಮಗೆ ಅರ್ಥವಾಗುತ್ತದೆ. ಹಾಗಾಗಿ ಭಾರತ ಸರ್ಕಾರ ಕೂಡ ಎರಡು ದೇಶಗಳ ನಡುವೆ ಸೌಹಾರ್ದ ಮತ್ತು ಸಹಾನುಭೂತಿಯ ವಾತಾವರಣವನ್ನು ಸೃಷ್ಟಿಸಲು ಭಾರತದಲ್ಲಿ ಜೈಲಿನಲ್ಲಿರುವ 83 ಪಾಕಿಸ್ತಾನಿ ಮೀನುಗಾರರನ್ನು ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಮೀನುಗಾರರ ಬಂಧನವನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನ್ ಇಂಡಿಯಾ ಡೆಮಾಕ್ರಸಿ ಮತ್ತು ಪೀಸ್ ಫೋರಂ ಎರಡೂ ದೇಶಗಳ ಸರ್ಕಾರಗಳಿಗೆ ಸೂಚಿಸಿದೆ.
ಇದನ್ನೂ ಓದಿ:ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ನಿಷೇಧ; ಪಟಾಕಿ ಸಿಡಿಸಿದರೆ ದಂಡದ ಬರೆ!