ಬಿಎಸ್ಎಫ್ ಪೋಸ್ಟ್ಗಳ ಮೇಲೆ ಪಾಕಿಸ್ತಾನದಿಂದ ಗುಂಡಿನ ದಾಳಿ ಜಮ್ಮು ಮತ್ತು ಕಾಶ್ಮೀರ: ಜಮ್ಮುವಿನ ಅರ್ನಿಯಾ ಮತ್ತು ಆರ್ಎಸ್ ಪುರ ಸೆಕ್ಟರ್ಗಳ ಅಂತಾರಾಷ್ಟ್ರೀಯ ಗಡಿ (ಐಬಿ) ಯಲ್ಲಿರುವ ಐದು ಬಿಎಸ್ಎಫ್ ಪೋಸ್ಟ್ಗಳ ಮೇಲೆ ಪಾಕಿಸ್ತಾನದ ರೇಂಜರ್‌ಗಳು ಗುರುವಾರ ರಾತ್ರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಗಡಿ ಭದ್ರತಾ ಪಡೆಯ ಯೋಧ ಮತ್ತು ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರ್ನಿಯಾ ಸೆಕ್ಟರ್ನಲ್ಲಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪಾಕಿಸ್ತಾನ ರೇಂಜರ್ಗಳಿಂದ ಗುಂಡಿನ ದಾಳಿ ಪ್ರಾರಂಭಿಸಿದ್ದರು, ಈ ಅಪ್ರಚೋದಿತ ಗುಂಡಿನ ದಾಳಿಗೆ ಬಿಎಸ್ಎಫ್ ಪಡೆ ಪ್ರತೀಕಾರ ತೀರಿಸಿಕೊಂಡಿದೆ. ಇನ್ನು ಗುಂಡಿನ ಚಕಮಕಿ ಮುಂದುವರಿದಿದೆ. ಗಾಯಗೊಂಡ ಯೋಧನನ್ನು ಚಿಕಿತ್ಸೆಗಾಗಿ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಿಎಸ್ಎಫ್ ಪ್ರತಿ ದಾಳಿಯಿಂದ ಪಾಕಿಸ್ತಾನದ ಎಷ್ಟು ಪೋಸ್ಟ್ಗಳಿಗೆ ಹಾನಿಯಾಗಿದೆ ಎಂಬ ವಿಚಾರ ಇಂದು ತಿಳಿಯುತ್ತದೆ ಎಂದು ಬಿಎಸ್ಎಫ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ರೇಂಜರ್‌ಗಳು ಜನವಸತಿ ಪ್ರದೇಶಗಳಲ್ಲಿ ಮಾರ್ಟರ್ ಶೆಲ್‌ಗಳನ್ನು ಹಾರಿಸಿದ್ದಾರೆ. ಇದರಿಂದ ಗಡಿ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಅರ್ನಿಯಾ, ಸುಚ್ಟ್‌ಗಢ್, ಸಿಯಾ, ಜಬೋವಾಲ್ ಮತ್ತು ಟ್ರೆವಾ ಪೋಸ್ಟ್ಗಳು ದಾಳಿಗೊಳಗಾಗಿವೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದ ದಾಳಿಯಿಂದ ಅರ್ನಿಯಾ ಮತ್ತು ಜಬೋವಾಲ್‌ನಲ್ಲಿನ ಜನರು, ವಿಶೇಷವಾಗಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತೊರೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಗಡಿ ಭಾಗದ ವಿವಿಧ ಗ್ರಾಮಗಳಲ್ಲಿ ಹಲವಾರು ಕುಟುಂಬಗಳು ಬಂಕರ್‌ಗಳಲ್ಲಿ ಆಶ್ರಯ ಪಡೆದಿವೆ. ಭಾರತ ಮತ್ತು ಪಾಕಿಸ್ತಾನವು ಫೆಬ್ರವರಿ 25, 2021 ರಂದು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಇತರ ಪ್ರದೇಶಗಳ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಕದನ ವಿರಾಮದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಒಪ್ಪಂದಕ್ಕೆ ಸಹಿ ಹಾಕಿದ ನಂತರ 12ಕ್ಕಿಂತಲೂ ಹೆಚ್ಚು ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿವೆ.
ಉಗ್ರರ ಹತ್ಯೆ:ಮತ್ತೊಂದೆಡೆ, ಪಾಕಿಸ್ತಾನದಿಂದ ಭಾರತದ ಗಡಿಯೊಳಗೆ ನುಸುಳಿ ಬಂದ ಐವರು ಉಗ್ರರನ್ನು ಭಾರತೀಯ ಸೇನೆ ಗುರುವಾರ ಹೊಡೆದುರುಳಿಸಿತ್ತು. ಕುಪ್ವಾರ ಜಿಲ್ಲೆಯ ಮಚ್ಚಲ್ ಸೆಕ್ಟರ್ನಲ್ಲಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರು ಸೇನಾ ಗುಂಡಿಗೆ ಬಲಿಯಾಗಿದ್ದರು. ಬೆಳಗ್ಗೆ ಇಬ್ಬರನ್ನು ಹತ್ಯೆ ಮಾಡಿದ್ದ ಸೇನೆ ಬಳಿಕ ಕಾರ್ಯಾಚರಣೆ ಮುಂದುವರಿಸಿ ಮತ್ತೆ ಮೂವರನ್ನು ಬಲಿ ತೆಗೆದುಕೊಂಡಿತ್ತು. ಒಟ್ಟು ಐವರನ್ನು ಹತ್ಯೆ ಮಾಡಿರುವ ಭದ್ರತಾ ಪಡೆಗಳು ಆ ಭಾಗದಲ್ಲಿ ಕಾರ್ಯಾಚರಣೆ ಮುಂದುವರಿಸಿವೆ.
ಇದನ್ನೂ ಓದಿ:ಪಾಕಿಸ್ತಾನದಿಂದ ಭಾರತದೊಳಗೆ ನುಸುಳಲು ಯತ್ನಿಸಿದ ಐವರು ಉಗ್ರರ ಹತ್ಯೆ