ಇಸ್ಲಾಮಾಬಾದ್: ಉಭಯ ನೆರೆ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ 'ಟಿವಿ ಚರ್ಚೆ' ನಡೆಸಲು ಬಯಸುವುದಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ರಷ್ಯಾಗೆ ಭೇಟಿ ನೀಡಿರುವ ಇಮ್ರಾನ್ಖಾನ್ ಸರ್ಕಾರಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಂಡರೆ ಅದು ನಮಗೇ ಒಳ್ಳೆಯದು. ಹೀಗಾಗಿ ನಾನು ಮೋದಿ ಅವರ ಜೊತೆ ದೂರದರ್ಶನದಲ್ಲಿ ಸಂವಾದ ನಡೆಸಲು ಇಚ್ಚಿಸುತ್ತೇನೆ ಎಂದರು.
ತಾವು ಅಧಿಕಾರಕ್ಕೆ ಬಂದ ಬಳಿಕ ಭಾರತದ ಜೊತೆ ಕಾಶ್ಮೀರ ಸಮಸ್ಯೆ ಬಗೆಹರಿಸಿಕೊಳ್ಳಲು ಮನವಿ ಮಾಡಿದ್ದೆ. ಆದರೆ, ಭಾರತ ಸರ್ಕಾರ ಈ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಲಿಲ್ಲ ಎಂದು ದೂರಿದರು.