ಅಲ್ವಾರ್ (ರಾಜಸ್ಥಾನ): ಎರಡು ಮಕ್ಕಳ ತಾಯಿ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ತೆರಳಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ನಂತರ ತನ್ನ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ. ಈ ಕುರಿತು ಮಾಧ್ಯಮಗಳಿಗೆ ಅಂಜು ಪತಿ ಅರವಿಂದ್ ಪ್ರತಿಕ್ರಿಯೆ ನೀಡಿದ್ದು, "ನಾನು ಆಕೆಗೆ ಯಾವುದೇ ವಿಚ್ಛೇದನ ನೀಡಿಲ್ಲ. ಆದ್ದರಿಂದ ಆಕೆ ಬೇರೆ ಪುರುಷನನ್ನು ಮದುವೆಯಾಗಲು ಸಾಧ್ಯವಿಲ್ಲ" ಎಂದರು.
"ಮೂರು ವರ್ಷಗಳ ಹಿಂದೆ ಅಂಜು ದೆಹಲಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ನ್ಯಾಯಾಲಯದಿಂದ ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಕಾನೂನುಬದ್ಧವಾಗಿ ಆಕೆ ಇನ್ನೂ ನನ್ನ ಹೆಂಡತಿ. ಹಾಗಾಗಿ ಅವಳು ಬೇರೆಯವರನ್ನು ಮದುವೆಯಾಗಲು ಸಾಧ್ಯವಿಲ್ಲ. ನಾನು ಖಂಡಿತವಾಗಿಯೂ ಅವಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಆಕೆ ಮತ್ತೆ ಮತ್ತೆ ಸುಳ್ಳು ಹೇಳುತ್ತಿದ್ದಾಳೆ. ಭಾರತಕ್ಕೆ ಮರಳಿದ ನಂತರ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇನೆ" ಎಂದು ಅರವಿಂದ್ ಹೇಳಿದ್ದಾರೆ.
"ದೇಶಕ್ಕೆ ಮರಳಿದ ಮೇಲೆ ಅಂಜುವನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಈ ಕುರಿತ ಅಂತಿಮ ನಿರ್ಧಾರವನ್ನು ನನ್ನ ಮಕ್ಕಳೇ ತೆಗೆದುಕೊಳ್ಳುತ್ತಾರೆ. ಆದರೀಗ ಮಕ್ಕಳು ಕೂಡ ಅವಳೊಂದಿಗೆ ಮಾತನಾಡಲು ಬಯಸುವುದಿಲ್ಲ. ಅಂಜು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಕಲಿ ದಾಖಲೆಗಳು ಮತ್ತು ಸಹಿ ಬಳಸಿರಬಹುದು. ವೀಸಾ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಅವಳು ನನಗೆ ಎಂದಿಗೂ ತಿಳಿಸಲಿಲ್ಲ, ನಾನು ಯಾವುದೇ ಪಾಸ್‌ಪೋರ್ಟ್ ಕಚೇರಿಗೆ ಹೋಗಿಲ್ಲ. ಹಾಗಾಗಿ, ಈ ಕುರಿತು ತನಿಖೆ ನಡೆಸಬೇಕು. ಭಾರತ ಸರ್ಕಾರ ಆಕೆಯ ಪಾಸ್‌ಪೋರ್ಟ್ ಮತ್ತು ವೀಸಾವನ್ನು ವಶಪಡಿಸಿಕೊಳ್ಳಬೇಕು" ಎಂದು ವಿನಂತಿಸಿಕೊಂಡಿದ್ದಾರೆ.