ಕರ್ನಾಟಕ

karnataka

ETV Bharat / bharat

ಪಂಜಾಬ್‌ ಅಂತಾರಾಷ್ಟ್ರೀಯ ಗಡಿ ಬಳಿ ಪಾಕ್ ಒಳನುಸುಳುಕೋರನ ಹತ್ಯೆ: ಬಿಎಸ್‌ಎಫ್ - ಪಂಜಾಬ್

ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿ (ಐಬಿ) ಬಳಿ ಪಾಕಿಸ್ತಾನದ ಒಳನುಸುಳುಕೋರನನ್ನು ಬಿಎಸ್‌ಎಫ್ ಗುಂಡಿಕ್ಕಿ ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

Representative image
ಪ್ರಾತಿನಿಧಿಕ ಚಿತ್ರ

By

Published : Aug 11, 2023, 10:26 AM IST

ಪಂಜಾಬ್:ಇಂದು ಮುಂಜಾನೆ ಪಂಜಾಬ್‌ನ ತರ್ನ್ ತರಣ್​ನಲ್ಲಿರುವ ಇಂಡೋ ಪಾಕ್​ ಗಡಿಯಲ್ಲಿ ಗಡಿ ಭದ್ರತಾ ಪಡೆ(BSF) ಸಿಬ್ಬಂದಿ ಪಾಕಿಸ್ತಾನದ ಒಳನುಸುಳುಕೋರನ್ನು ಗುಂಡಿಕ್ಕಿ ಹತ್ಯೆ ಮಾಡಿದೆ. ಆ ಮೂಲಕ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಮುಂಜಾನೆ ಬಿಎಸ್​ಎಫ್​ ಪಡೆಗಳು ತರ್ನ್ ತರಣ್​ ಜಿಲ್ಲೆಯ ಗಡಿ ಗ್ರಾಮ-ತೆಕಲನ್ ಬಳಿ ಪಾಕಿಸ್ತಾನಿ ನುಸುಳುಕೋರನ ಅನುಮಾನಾಸ್ಪದ ಚಲನವಲನವನ್ನು ಸೇನಾ ಗಸ್ತು ಪಡೆ ಗಮನಿಸಿತ್ತು. ಆರಂಭದಲ್ಲಿ ಹೀಗೆ ಒಳನುಸುಳುವ ಯತ್ನ ಮಾಡಿದ್ದ ವ್ಯಕ್ತಿಗೆ ನಿಲ್ಲುವಂತೆ ಸೂಚಿಸಿತ್ತು. ಆದರೆ, ನುಸುಳುಕೋರ ಸೂಚನೆ ನಿರ್ಲಕ್ಷಿಸಿ ಒಳನುಗ್ಗಲು ಯತ್ನಿಸಿದ. ನುಸುಳುಕೋರನ ದುಷ್ಕೃತ್ಯವನ್ನು ತಡೆಯಲು ಗಡಿ ಭದ್ರತಾ ಪಡೆ ಆತ್ಮರಕ್ಷಣೆಗಾಗಿ ದುಷ್ಕರ್ಮಿಯ ಮೇಲೆ ಗುಂಡು ಹಾರಿಸಿ ಸ್ಥಳದಲ್ಲೇ ಕೊಂದು ಹಾಕಿದೆ ಎಂದು ಬಿಎಸ್ಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ

ಈ ತಿಂಗಳ ಆರಂಭದಲ್ಲಿ ಬಿಎಸ್‌ಎಫ್ ಪಾಕಿಸ್ತಾನದ ಇಬ್ಬರು ಅಪರಿಚಿತ ನುಸುಳುಕೋರರನ್ನು ಹತ್ಯೆ ಮಾಡಿತ್ತು. ಮೇ ತಿಂಗಳಲ್ಲಿ ಭಾರತ - ಪಾಕಿಸ್ತಾನ ಗಡಿ ಸಮೀಪ ಶಂಕಿತ ನಿಷಿದ್ಧ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೇ ಅದೇ ತಿಂಗಳಲ್ಲಿ ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿತ್ತು.

2022ರಲ್ಲಿ ಪಂಜಾಬ್ ಫ್ರಾಂಟಿಯರ್‌ನಲ್ಲಿ ಬಿಎಸ್‌ಎಫ್‌ ಯೋಧರು ಪಾಕ್​ನ 22 ಡ್ರೋನ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ಇಬ್ಬರು ಒಳನುಸುಳುಕೋರನ್ನು ಕೊಂದು ಅವರಿಂದ 316 ಕಿಲೋಗ್ರಾಂಗಳಷ್ಟು ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ಬಿಎಸ್​ಎಫ್​ ತನ್ನ ಹಿಂದಿನ ಹೇಳಿಕೆಯಲ್ಲಿ ಈ ಬಗ್ಗೆ ಉಲ್ಲೇಖಿಸಿತ್ತು ಕೂಡಾ.

ಪಂಜಾಬ್ ಗಡಿ ಭದ್ರತಾ ಪಡೆ ಅತ್ಯಂತ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿವೆ. ಪರಿಣಾಮವಾಗಿ ಬಿಎಸ್​ಎಫ್​​ ಯಶಸ್ವಿಯಾಗಿ 22 ಡ್ರೋನ್‌ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. 316.988 ಕೆ.ಜಿ ಹೆರಾಯಿನ್, 67 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ವಿವಿಧ ಪ್ರಕರಣಗಳಲ್ಲಿ 23 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದೆ ಎಂದು ಬಿಎಸ್​ಎಫ್​ ಹೇಳಿದೆ.

ಇದನ್ನೂ ಓದಿ:ಪಾಕ್​ನಿಂದ ಒಳನುಸುಳಲು ಯತ್ನಿಸಿದ ಪಾಕ್​ ಉಗ್ರ ಬಿಎಸ್​ಎಫ್​ ಗುಂಡೇಟಿಗೆ ಬಲಿ.. 4 ಕೆಜಿ ಮಾದಕ ವಸ್ತು ವಶ: ವಿಡಿಯೋ

ಗುಂಡಿನ ಚಕಮಕಿ - ಭಯೋತ್ಪಾದಕ ಹತ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಬರಿಯಾಮಾ ಪ್ರದೇಶದಲ್ಲಿ ಇತ್ತೀಚೆಗೆ (ಆ.6) ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿತ್ತು. ಮೂಲಗಳ ಪ್ರಕಾರ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕ ಹತನಾಗಿದ್ದ. ಭಾರತೀಯ ಸೇನೆಯ ಪ್ಯಾರಾ ಕಮಾಂಡೋಗಳು ಕೂಡ ಎನ್‌ಕೌಂಟರ್‌ನಲ್ಲಿ ತೊಡಗಿದ್ದರು. ಈ ಪ್ರದೇಶವನ್ನು ಭಾರತೀಯ ಸೇನೆ ಸುತ್ತುವರಿದಿದೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದವು. ಬುಧಾಲ್ ಪ್ರದೇಶದ ಗುಂಧಾ-ಖಾವಾಸ್ ಗ್ರಾಮದಲ್ಲಿ ಪೊಲೀಸರು ಮತ್ತು ಸೇನೆಯು ಆರಂಭಿಸಿದ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳೊಂದಿಗಿನ ಆರಂಭಿಕ ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕನನ್ನು ಭಾರತೀಯ ಸೇನಾಪಡೆ ಸದೆ ಬಡಿದಿತ್ತು.

ಮೂವರು ಯೋಧರಿಗೆ ಗಾಯ:ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಶುಕ್ರವಾರ(ಆ.4) ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಪ್ರತ್ಯೇಕತಾವಾದಿ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ರಾಷ್ಟ್ರೀಯ ರೈಫಲ್ಸ್​ನ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಕುಲ್ಗಾಮ್ ಜಿಲ್ಲೆಯ ಹಾಲನ್ ಗ್ರಾಮದಲ್ಲಿ ಘರ್ಷಣೆ ನಡೆದಿತ್ತು. ಉಗ್ರರ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಅಡಗಿ ಕುಳಿತಿದ್ದ ಉಗ್ರರು ಭದ್ರತಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದರು. ನಂತರ ಭದ್ರತಾ ಸಿಬ್ಬಂದಿ ಕೂಡ ಪ್ರತಿ ದಾಳಿ ನಡೆಸಿದ್ದರು.

ಇದನ್ನೂ ಓದಿ: Army encounter: ರಜೌರಿಯಲ್ಲಿ 2ನೇ ದಿನಕ್ಕೆ ಕಾಲಿಟ್ಟ ಗುಂಡಿನ ಚಕಮಕಿ: ಓರ್ವ ಭಯೋತ್ಪಾದಕ ಹತ

ABOUT THE AUTHOR

...view details