ಇಸ್ಲಾಮಾಬಾದ್: 2019 ರ ಆಗಸ್ಟ್ 5 ರ ಪೂರ್ವದ ಜಮ್ಮು ಮತ್ತು ಕಾಶ್ಮೀರದ ಸ್ಥಿತಿಯನ್ನು ಪುನಃ ಸ್ಥಾಪಿಸಿದರೆ ಪಾಕಿಸ್ತಾನ ಭಾರತದೊಂದಿಗೆ ಮಾತುಕತೆಗೆ ತಯಾರಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಭಾರತವು ಆಗಸ್ಟ್ 5, 2019 ರಂದು 370 ನೇ ವಿಧಿ ಅನ್ವಯ ದೊರೆತಿದ್ದ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತು. ಬಳಿಕ ಅದನ್ನು ಲಡಾಕ್, ಜಮ್ಮು ಕಾಶ್ಮೀರ ಎಂಬೆರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತು.
"ಈಗಿನ ಸನ್ನಿವೇಶದಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ತನ್ನ ಸಂಬಂಧವನ್ನು ಪುನಶ್ಚೇತನಗೊಳಿಸಿದರೆ, ಅದು ಕಾಶ್ಮೀರಿಗಳಿಗೆ ನಮ್ಮ ಬೆನ್ನು ತೋರಿಸಿದಂತೆ ಆಗಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸದೆ ಇದ್ದರೆ ಮಾತುಕತೆ ನಡೆಸುವುದು ಕಾಶ್ಮೀರಿಗಳಿಗೆ ನೀಡುತ್ತಿರುವ ಬೆಂಬಲವನ್ನು ವಾಪಸ್ ಪಡೆದಂತಾಗುತ್ತದೆ. ಆದ ಕಾರಣ ಆಗಸ್ಟ್ 5 ರಂದು ಭಾರತ ಕೈಗೊಂಡಿರುವ ಕ್ರಮಗಳನ್ನು ಹಿಂಪಡೆದರೆ ಖಂಡಿತವಾಗಿಯೂ ನಾವು ಮಾತುಕತೆ ನಡೆಸಲು ಸಿದ್ಧರಾಗಿದ್ದೇವೆ" ಎಂದು ನೇರ ಪ್ರಶ್ನೋತ್ತರ ಅವಧಿಯಲ್ಲಿ ಖಾನ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ದೇಶವು ತನ್ನ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರವಿಲ್ಲದ ವಾತಾವರಣದಲ್ಲಿ ತನ್ನೊಂದಿಗೆ ನೆರೆಯ ದೇಶ ಸಾಮಾನ್ಯ ಸಂಬಂಧವನ್ನು ಬಯಸಬೇಕು. ಭಯೋತ್ಪಾದನೆ ಮತ್ತು ಹಗೆತನವಿಲ್ಲದ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಭಾರತ ಈಗಾಗಲೇ ತಿಳಿಸಿದೆ.