ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ): ಭಾರತ-ನೇಪಾಳ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ 62 ವರ್ಷದ ಪಾಕಿಸ್ತಾನದ ಮಹಿಳೆ ಮತ್ತು ಆಕೆಯ ಅಪ್ರಾಪ್ತ ಮಗನನ್ನು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಇವರ ಬಳಿ ಮಾನ್ಯವಾದ ವೀಸಾ ಹಾಗೂ ಯಾವುದೇ ಅಧಿಕೃತವಾದ ದಾಖಲೆಗಳು ಇಲ್ಲ. ತಮ್ಮ ಸಹೋದರಿಯನ್ನು ಭೇಟಿ ಮಾಡಲು ಮಹಿಳೆ ತಮ್ಮ ಮಗನೊಂದಿಗೆ ಅಕ್ರಮವಾಗಿ ಬಂದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪಾಕಿಸ್ತಾನದ ಪ್ರಜೆಯಾದ 62 ವರ್ಷದ ಶೈಸ್ತಾ ಹನೀಫ್ ಹಾಗೂ ಈಕೆಯ 11 ವರ್ಷದ ಮಗ ಬಂಧಿತರು. ಬುಧವಾರ ಬೆಳಗ್ಗೆ ನೇಪಾಳದ ಕಾಕರ್ವಿಟಾದಿಂದ ಮೆಚಿ ನದಿಗೆ ನಿರ್ಮಿಸಲಾಗಿರುವ ಏಷ್ಯನ್ ಹೆದ್ದಾರಿಯ ಸೇತುವೆಯನ್ನು ತಾಯಿ-ಮಗ ದಾಟಿ ಗಡಿಯ ಸಿಲಿಗುರಿ ಸಮೀಪದ ಪಾನಿಟಂಕಿ ಎಂಬಲ್ಲಿಗೆ ಆಗಮಿಸಿದ್ದಾರೆ. ಈ ವಿಷಯ ತಿಳಿದ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ 41ನೇ ಬೆಟಾಲಿಯನ್ ಯೋಧರು ಇಬ್ಬರನ್ನು ತಡೆದಿದ್ದಾರೆ.
ಯೋಧರು ಇಬ್ಬರನ್ನೂ ವಿಚಾರಣೆ ನಡೆಸಿದ ನಂತರ ಡಾರ್ಜಿಲಿಂಗ್ನ ಖರಿಬರಿ ಪೊಲೀಸ್ ಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದೇ ವೇಳೆ, ಇಬ್ಬರನ್ನು ತಪಾಸಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳು ಪತ್ತೆಯಾಗಿವೆ. ಇವುಗಳ ಆಧಾರದ ಮೇಲೆ ತಾಯಿ-ಮಗ ಪಾಕಿಸ್ತಾನದ ಕರಾಚಿಯ ಗಹನ್ಮಾರ್ ಸ್ಟ್ರೀಟ್‌ನಲ್ಲಿರುವ ಸರಾಫಾ ಬಜಾರ್ ನಿವಾಸಿಗಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಸೋಶಿಯಲ್ ಮೀಡಿಯಾ ಗೆಳೆಯನ ಭೇಟಿ ಮಾಡಲು ಪಾಕಿಸ್ತಾನಕ್ಕೆ ತೆರಳಿದ ರಾಜಸ್ಥಾನದ ವಿವಾಹಿತ ಮಹಿಳೆ
ಕಳೆದ ವರ್ಷ ಮೇ 29ರಂದು ಇವರಿಗೆ ಪ್ರವಾಸಿ ಪಾಸ್‌ಪೋರ್ಟ್‌ಗಳನ್ನು ಪಾಕಿಸ್ತಾನ ಸರ್ಕಾರ ವಿತರಿಸಿದೆ. ಮಹಿಳೆಯ ಪಾಸ್‌ಪೋರ್ಟ್ 2032ರ ವರೆಗೆ ಮತ್ತು ಬಾಲಕನ ಪಾಸ್‌ಪೋರ್ಟ್ ಮೇ 2027ರ ವರೆಗೆ ಮಾನ್ಯವಾಗಿರುತ್ತದೆ. ಭಾರತಕ್ಕೆ ಆಗಮಿಸುವ ಮುನ್ನ ಇಬ್ಬರೂ ಪಾಕಿಸ್ತಾನದಿಂದ ಸೌದಿ ಅರೇಬಿಯಾಕ್ಕೆ ಹೋಗಿದ್ದರು. ನವೆಂಬರ್ 5ರಂದು ಭಾರತ ಮತ್ತು ನೇಪಾಳಕ್ಕೆ ವಿಮಾನ ಟಿಕೆಟ್‌ಗಳನ್ನು ಖರೀದಿಸಿದ್ದರು. ನವೆಂಬರ್ 11ರಂದು ಅವರು ಸೌದಿ ಅರೇಬಿಯಾದ ಜೆಡ್ಡಾ ವಿಮಾನ ನಿಲ್ದಾಣದಿಂದ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿ, ಅಲ್ಲಿಂದ ಕಠ್ಮಂಡುಗೆ ಹೋಗುವ ವಿಮಾನವನ್ನು ಹತ್ತಿದ್ದರು. ಈ ಕುರಿತ ಎಲ್ಲ ವಿಮಾನ ಟಿಕೆಟ್‌ಗಳನ್ನು ಎಸ್‌ಎಸ್‌ಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದಲ್ಲದೇ ನವೆಂಬರ್ 5ರಂದು ನೇಪಾಳ ಸರ್ಕಾರ ನೀಡಿದ ವೀಸಾ, ಎರಡು ಮೊಬೈಲ್ ಫೋನ್‌ಗಳು, ಎರಡು ಸಿಮ್ ಕಾರ್ಡ್‌ಗಳು, ಒಂದು ಮೆಮೊರಿ ಕಾರ್ಡ್, ಎರಡು ಪೆನ್ ಡ್ರೈವ್‌ಗಳು, 10,000 ನೇಪಾಳದ ಕರೆನ್ಸಿಗಳು, 16,350 ರೂಪಾಯಿ, 6 ಯುರೋಗಳು, 166 ರಿಯಾಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಡಾರ್ಜಿಲಿಂಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರವೀಣ್ ಪ್ರಕಾಶ್ ಪ್ರತಿಕ್ರಿಯಿಸಿ, ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಪ್ರಜೆಗಳಾದ ತಾಯಿ ಮತ್ತು ಮಗ ಬಂಧಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಇವರು ನೆಲೆಸಿದ್ದರು. ಆದರೆ, ಮಾನ್ಯ ವೀಸಾ ಇಲ್ಲದೆ ಮಹಿಳೆ ತನ್ನ ಮಗನೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ತನ್ನ ಸಹೋದರಿಯನ್ನು ಭೇಟಿ ಮಾಡಲು ಬಂದಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಸೌದಿಯಲ್ಲಿ ಗಂಡ.. ಪಬ್ಜಿ ಗೇಮ್ ಪ್ರಿಯಕರನಿಗಾಗಿ ನಿವೇಶನ ಮಾರಿ ಭಾರತಕ್ಕೆ ಬಂದ ಪಾಕ್ ಮಹಿಳೆ ಪೊಲೀಸರ ಅತಿಥಿ!