ನವದೆಹಲಿ/ನೋಯ್ಡಾ:ಪಬ್ಜಿ ಗೇಮ್ನಲ್ಲಿ ಪರಿಚಯವಾದ ಪ್ರಿಯಕರನಿಗಾಗಿ ಭಾರತಕ್ಕೆ ಬಂದ ಪಾಕಿಸ್ತಾನದ ಮಹಿಳೆಯನ್ನು ಹರಿಯಾಣದ ಬಲ್ಲಭಗಢದಲ್ಲಿ ಗ್ರೇಟರ್ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ ಮೊಬೈಲ್ ಫೋನ್‌ಗಳು ಹಾಗೂ ಪಾಸ್‌ಪೋರ್ಟ್‌ಗಳು ಸೇರಿ ಹಲವು ದಾಖಲೆಗಳು ಮತ್ತು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪಾಕಿಸ್ತಾನಿ ಮಹಿಳೆಯು ಗ್ರೇಟರ್ ನೋಯ್ಡಾದ ರಬುಪುರದ ನಿವಾಸಿ ಸಚಿನ್ ಎಂಬಾತನ ಜೊತೆಗೆ ಪಬ್ಜಿ ಗೇಮ್ ಆಡುತ್ತಿದ್ದಾಗ ಸ್ನೇಹ ಬೆಳೆಸಿಕೊಂಡಿದ್ದಳು. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು. ನಂತರ ಇಬ್ಬರೂ ಒಟ್ಟಿಗೆ ಜೀವಿಸುವ ನಿರ್ಧಾರಕ್ಕೆ ಬಂದಿದ್ದರು. ಅಂತೆಯೇ, ಮಹಿಳೆ ಭಾರತಕ್ಕೆ ಬರುವ ಮೊದಲು ಇಬ್ಬರೂ ನೇಪಾಳದಲ್ಲಿ ಒಮ್ಮೆ ಭೇಟಿಯಾಗಿದ್ದರು. ಇದಾದ ಬಳಿಕ ಮಹಿಳೆ ಪಾಕಿಸ್ತಾನದಲ್ಲಿರುವ ತನ್ನ ನಿವೇಶನವನ್ನು ಮಾರಿ ಪ್ರವಾಸಿ ವೀಸಾದಲ್ಲಿ ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳ ತಲುಪಿದ್ದರು.
ನೇಪಾಳದಿಂದ ಅಕ್ರಮವಾಗಿ ಭಾರತಕ್ಕೆ ಬಂದ ತನ್ನ ಪ್ರಿಯಕರ ಸಚಿನ್ ಜೊತೆ ಗ್ರೇಟರ್ ನೋಯ್ಡಾದ ರಬೂಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದ್ದರು. ಇದೇ ವೇಳೆ, ಇಬ್ಬರು ಮದುವೆಯಾಗಲು ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದರು. ಆದರೆ, ಈ ಸಮಯದಲ್ಲಿ ಪಾಕಿಸ್ತಾನಿ ಮಹಿಳೆ ದಾಖಲೆಗಳು ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಗೊತ್ತಾಗಿದೆ. ಮತ್ತೊಂದೆಡೆ, ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ಸಿಕ್ಕಿದೆ ಎಂಬ ವಿಷಯವು ಪಾಕಿಸ್ತಾನಿ ಮಹಿಳೆಗೂ ತಲುಪಿದೆ. ಅಂತೆಯೇ, ಶನಿವಾರ ಈ ಮಹಿಳೆ ತನ್ನ ಪ್ರಿಯಕರ ಮತ್ತು ನಾಲ್ವರು ಮಕ್ಕಳೊಂದಿಗೆ ರಬೂಪುರದಿಂದ ಪಲಾಯನ ಮಾಡಿದ್ದರು.
ಮಹಿಳೆಯ ಜೊತೆ ಪ್ರಿಯಕರ ಸಹ ಸೆರೆ:ರಬೂಪುರದಿಂದ ಪಲಾಯನ ಮಾಡಿದ ವಿಷಯ ತಿಳಿದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಆಗ ಹರಿಯಾಣದ ಬಲ್ಲಭಗಢದಲ್ಲಿ ಮಹಿಳೆಯ ಹಾಗೂ ಆಕೆಯ ನಾಲ್ವರು ಮಕ್ಕಳ ಜೊತೆ ಪ್ರಿಯಕರನನ್ನೂ ಪತ್ತೆ ಹೆಚ್ಚಿ ಸೆರೆ ಹಿಡಿಯಲಾಗಿದೆ. ಬಂಧಿತ ಪಾಕಿಸ್ತಾನಿ ಮಹಿಳೆಯಿಂದ ಎರಡು ವಿಡಿಯೋ ಕ್ಯಾಸೆಟ್‌ಗಳು, ನಾಲ್ಕು ಮೊಬೈಲ್ ಫೋನ್‌ಗಳು, ಒಂದು ಸಿಮ್, ಒಂದು ಒಡೆದ ಮೊಬೈಲ್ ಫೋನ್, ಒಂದು ಫ್ಯಾಮಿಲಿ ರಿಜಿಸ್ಟರ್ ಪ್ರಮಾಣಪತ್ರ, ನಾಲ್ಕು ಜನನ ಪ್ರಮಾಣಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಲ್ಲದೇ, ಒಂದು ವಿವಾಹ ನೋಂದಣಿ ಪ್ರಮಾಣಪತ್ರ, ಮೂರು ಆಧಾರ್ ಕಾರ್ಡ್‌ಗಳು, ಒಂದು ಪಾಕಿಸ್ತಾನ ಸರ್ಕಾರದ ರಾಷ್ಟ್ರೀಯ ಡೇಟಾಬೇಸ್ ಮತ್ತು ನೋಂದಣಿ ಪತ್ರ, ಆಂತರಿಕ ಸಚಿವಾಲಯದ ಪಟ್ಟಿ, ಐದು ಪಾಸ್‌ಪೋರ್ಟ್‌ಗಳು ಮತ್ತು ಪೋಖರಾ ಕಠ್ಮಂಡುವಿನಿಂದ ದೆಹಲಿಗೆ ಬಂದ ಬಸ್ ಟಿಕೆಟ್ ವಶಪಡಿಸಿಕೊಳ್ಳಲಾಗಿದೆ. ಸದ್ಯ ಪಾಕಿಸ್ತಾನಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ಸಾದ್ ಮಿಯಾನ್ ಖಾನ್ ಹೇಳಿದ್ದಾರೆ.
ಇದೇ ವೇಳೆ ವಿಚಾರಣೆಯ ಸಮಯದಲ್ಲಿ ಪಾಕಿಸ್ತಾನದಲ್ಲಿರುವ ತನ್ನ ಪರಿಚಯಸ್ಥರ ಮೊಬೈಲ್ ಸಂಖ್ಯೆಗಳನ್ನು ಮಹಿಳೆ ಪಡೆದಿದ್ದಾಳೆ. ಆದರೆ, ಆ ಸಂಖ್ಯೆಗಳಿಗೆ ಸಂಪರ್ಕಿಸಿದಾಗ ತಪ್ಪು ಎಂದು ಕಂಡುಬಂದಿದೆ. ಇದರಿಂದ ಮಹಿಳೆ ಬಗ್ಗೆ ಅನುಮಾನ ಮೂಡುತ್ತಿದೆ. ಹೀಗಾಗಿ ಪೊಲೀಸರು ಮತ್ತು ಕೇಂದ್ರದ ಭದ್ರತಾ ಏಜೆನ್ಸಿಗಳು ಮಹಿಳೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಯಲ್ಲಿ ಸಿಕ್ಕ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸೌದಿಯಲ್ಲಿ ಗಂಡ - ನಿವೇಶನ ಮಾರಿ ಭಾರತಕ್ಕೆ:ಈ ಪಾಕಿಸ್ತಾನಿ ಮಹಿಳೆಯ ಅಲ್ಲಿನ ಸಿಂಧ್ ಪ್ರಾಂತ್ಯದ ನಿವಾಸಿ ಗುಲಾಮ್ ಹೈದರ್ ಎಂಬಾತನನ್ನು 2014ರಲ್ಲೇ ಮದುವೆಯಾಗಿದೆ. 2019 ರಲ್ಲಿ ಪತಿ ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ಹೋಗಿದ್ದರು. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪಬ್ಜಿ ಗೇಮ್ ಆಡುವಾಗ ಗ್ರೇಟರ್ ನೋಯ್ಡಾದ ರಬುಪುರ ನಿವಾಸಿ ಸಚಿನ್ ಸಂಪರ್ಕಕ್ಕೆ ಬಂದಿದ್ದಾನೆ. ಅಂತೆಯೇ, ಆತನನ್ನು ಭೇಟಿ ಮಾಡಲೆಂದು ಮಹಿಳೆ 12 ಲಕ್ಷ ರೂ.ಗೆ ನಿವೇಶನ ಮಾರಾಟ ಮಾಡಿದ್ದಾಳೆ ಎಂದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಡಿಸಿಪಿ ಮಾಹಿತಿ ನೀಡುದ್ದಾರೆ.
ಮೊದಲ ಬಾರಿಗೆ ಇದೇ ಮಾರ್ಚ್ನಲ್ಲಿ ಪಾಕಿಸ್ತಾನದಿಂದ ಶಾರ್ಜಾ ಮೂಲಕ ಕಠ್ಮಂಡು ನೇಪಾಳಕ್ಕೆ ಈ ಮಹಿಳೆ ಬಂದಿದ್ದಳು. ಅಲ್ಲಿಗೆ ಪ್ರಿಯಕರ ಸಚಿನ್ ಸಹ ತೆರಳಿದ್ದರು. ಇಬ್ಬರು ಮೊದಲ ಸಲ ಅಲ್ಲಿಯೇ ಮುಖಾಮುಖಿ ಭೇಟಿಯಾಗಿದ್ದರು. ನಂತರ ಕಠ್ಮಂಡುವಿನ ಹೋಟೆಲ್‌ನಲ್ಲಿ ಒಟ್ಟಿಗೆ 7 ದಿನಗಳ ಕಾಲ ಇದ್ದರು. ಇದಾದ ಬಳಿಕ ಆಕೆ ಪಾಕಿಸ್ತಾನಕ್ಕೆ ವಾಪಸಾಗಿದ್ದಳು. ಮೇ 13ರಂದು ಪ್ರಿಯಕರ ಸಚಿನ್ ಮನೆಗೆ ಬಂದಿದ್ದಳು ಎಂಬ ಮಾಹಿತಿ ಸಿಕ್ಕಿದೆ ಎಂದು ಅವರು ವಿವರಿಸಿದ್ದಾರೆ.
ಇದನ್ನೂ ಓದಿ:Pak Woman in India : ಪಬ್ಜಿ ಆಡುತ್ತ ಬೆಳೆದ ಸಲುಗೆ, ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ.. ಬಂಧನಕ್ಕಾಗಿ ಪೊಲೀಸರಿಂದ ಹುಡುಕಾಟ