ಇಸ್ಲಾಮಾಬಾದ್:ಕಾಶ್ಮೀರದ ಸಮಸ್ಯೆಯನ್ನು ಎತ್ತಿ ಹಿಡಿಯಲು ಮತ್ತು ಜಗತ್ತಿನ ಮುಸ್ಲಿಂ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳ ಬೆಂಬಲ ಪಡೆಯಲು ಮುಂದಿನ ವರ್ಷ ಇಸ್ಲಾಮಾಬಾದ್‌ನಲ್ಲಿ ಸಭೆ ಕರೆಯುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿದ್ದಾರೆ.
ಮುಲ್ತಾನ್‌ನಲ್ಲಿ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ರಾಜಕೀಯ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ.
"ಮುಂದಿನ ವರ್ಷ ಜಗತ್ತಿನ ಮುಸ್ಲಿಂ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳನ್ನು ಇಸ್ಲಾಮಾಬಾದ್ಗೆ ಆಹ್ವಾನಿಸುತ್ತೇನೆ. ಈ ವೇಳೆ ಕಾಶ್ಮೀರ ವಿಷಯದ ಬಗ್ಗೆ ಅವರನ್ನು ಒಟ್ಟುಗೂಡಿಸಲು ಪ್ರಯತ್ನಿಸಲಾಗುವುದು" ಎಂದು ಅವರು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭಾರತ, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ಕಾಶ್ಮೀರ ವಿವಾದ ಬಿಟ್ಟು, ತನ್ನದೇ ಆದ ಇತರೆ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವ ಕಡೆ ಗಮನ ನೀಡುವುದು ಸೂಕ್ತ. ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರವಿಲ್ಲದ ವಾತಾವರಣದಲ್ಲಿ ಇಸ್ಲಾಮಾಬಾದ್‌ನೊಂದಿಗಿನ ಸಂಬಂಧವನ್ನು ಬಯಸುವುದಾಗಿ ತಿಳಿಸಿದೆ.