ಲಾಹೋರ್: ಎರಡು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ನ ಜಮ್ಮತ್-ಉದ್-ದವಾಹ್ (ಜೆಯುಡಿ) ಭಯೋತ್ಪಾದಕ ಗುಂಪಿನ ವಕ್ತಾರ ಯಾಹ್ಯಾ ಮುಜಾಹಿದ್ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ 32 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಉಗ್ರ ಹಫೀಜ್ ಸಯೀದ್ ವಕ್ತಾರನಿಗೆ 32 ವರ್ಷ ಜೈಲು: ಪಾಕ್ ಕೋರ್ಟ್ನಿಂದ ಶಿಕ್ಷೆ - ಜೆಯುಡಿ ವಕ್ತಾರ ಯಾಹ್ಯಾ ಮುಜಾಹಿದ್
ಪಾಕ್ನ ಎಟಿಸಿ ನ್ಯಾಯಾಧೀಶ ಇಜಾಜ್ ಅಹ್ಮದ್ ಬುಟ್ಟರ್ ಅವರು ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಜೆಯುಡಿ ವಕ್ತಾರ ಯಾಹ್ಯಾ ಮುಜಾಹಿದ್ಗೆ 32 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಭಯೋತ್ಪಾದನಾ ವಿರೋಧಿ ನ್ಯಾಯಾಲಯ (ಎಟಿಸಿ) ಬುಧವಾರ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಪೂರೈಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಯೀದ್ ಅವರ ಸೋದರ ಮಾವ ಸೇರಿದಂತೆ ಇನ್ನೆರಡು ಜಮಾತ್ ಉದ್ ದವಾ ಉಗ್ರಗಾಮಿ ಸಂಘಟನೆ ನಾಯಕರನ್ನು ಶಿಕ್ಷೆಗೊಳಪಡಿಸಿದೆ. ಪ್ರೊಫೆಸರ್ ಜಾಫರ್ ಇಕ್ಬಾಲ್ ಮತ್ತು ಪ್ರೊಫೆಸರ್ ಹಫೀಜ್ ಅಬ್ದುಲ್ ರೆಹಮಾನ್ ಮಕ್ಕಿ (ಸಯೀದ್ ಅವರ ಸೋದರ ಮಾವ) ಅವರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 16 ವರ್ಷ ಹಾಗೂ ಮತ್ತೊಂದು ಕೇಸ್ನಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇತರ ಇಬ್ಬರು ಉಗ್ರ ಸಂಘಟನೆ ಸದಸ್ಯರಾದ ಅಬ್ದುಲ್ ಸಲಾಮ್ ಬಿನ್ ಮುಹಮ್ಮದ್ ಮತ್ತು ಲುಕ್ಮಾನ್ ಷಾಗೆ ಭಯೋತ್ಪಾದಕ ಕೆಲಸಗಳಿಗೆ ಹಣಕಾಸು ನೆರವು ನೀಡಿದ ಪ್ರಕರಣಗಳಲ್ಲಿ ದೋಷಾರೋಪಣೆ ಹೊರಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಪಾಕ್ ಕೋರ್ಟ್ ನವೆಂಬರ್ 16 ರಂದು ಸಾಕ್ಷಿಗಳನ್ನ ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್‌ಗೆ ನಿರ್ದೇಶನ ನೀಡಿದೆ. ಇನ್ನು ಪಾಕ್ನ ವಿವಿಧ ಪ್ರಾಂತ್ಯಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಸಯೀದ್ ಮತ್ತು ಆತನ ಸಹಚರರ ವಿರುದ್ಧ ಪಂಜಾಬ್ ಪೊಲೀಸರು 23 ಪ್ರಕರಣಗಳನ್ನ ದಾಖಲಿಸಿದ್ದಾರೆ.