ಜಶ್‌ಪುರ (ಛತ್ತೀಸ್‌ಗಢ):ಬುಡಕಟ್ಟು ಸಮುದಾಯದ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ದಂಪತಿ ಮೊದಲು ತಮ್ಮ ಮಕ್ಕಳನ್ನು ಕೊಂದು ನಂತರ ಅವರೂ ಕೂಡ ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇಲ್ಲಿನ ಬಗೀಚಾ ಪೊಲೀಸ್ ಠಾಣೆ ವ್ಯಾಪ್ತಿಯ ಸಂಹರ್ ಬಹಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮರದ ಕೆಳಗೆ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಇದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆದರೆ, ದಂಪತಿಯ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ದಂಪತಿ ಮತ್ತವರ ಇಬ್ಬರು ಮಕ್ಕಳು ಜುಮ್ರಾದು ಮಾರ್ ಬಸ್ತಿಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಪಕ್ಕದ ಅರಣ್ಯ ಪ್ರದೇಶದಲ್ಲಿ ಮಹುವಾ ಹೂವು ಸಂಗ್ರಹಿಸುವ ವಿಚಾರವಾಗಿ ನೆರೆಯವರೊಂದಿಗೆ ದಂಪತಿ ಜಗಳವಾಡಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಸದ್ಯ ಅಕ್ಕ-ಪಕ್ಕದ ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿ ರವಿ ಮಿತ್ತಲ್ ಕೂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
ಸಂರಕ್ಷಿತ ಬುಡಕಟ್ಟು ಜನಾಂಗ: ಛತ್ತೀಸ್ಗಢದಲ್ಲಿರುವ 42 ಬುಡಕಟ್ಟುಗಳಲ್ಲಿ ಒಂದಾದ ಪಹಾಡಿ ಕೊರ್ವಾ ಸಮುದಾಯಕ್ಕೆ ಮೃತ ದಂಪತಿ ಸೇರಿದ್ದಾರೆ. ಈ ಸುಮುದಾಯವು ರಾಷ್ಟ್ರಪತಿಗಳ ದತ್ತುಪುತ್ರರು ಎಂದು ಕರೆಯಲ್ಪಡುವ ಸಂರಕ್ಷಿತ ಬುಡಕಟ್ಟು ಜನಾಂಗವಾಗಿದೆ. ಒಟ್ಟು 42 ಬುಡಕಟ್ಟುಗಳಲ್ಲಿ ಏಳು ಜನಾಂಗಗಳನ್ನು ಸಂರಕ್ಷಿಸಲಾಗಿದೆ. ಇವರನ್ನು ವಿಶೇಷ ಹಿಂದುಳಿದ ಬುಡಕಟ್ಟು ಜನಾಂಗ ಎಂದು ಘೋಷಿಸಲಾಗಿದೆ.