ನವದೆಹಲಿ: ಮೂರನೇ ಕೊರೊನಾ ಅಲೆಯು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ತಜ್ಞರು ಈ ಹಿಂದೆ ಎಚ್ಚರಿಸಿದ್ದರು. ಇದೀಗ ಅಂತಹ ಸೂಚನೆ ನೀಡುವ ಯಾವುದೇ ಪ್ರಕರಣ ಅಥವಾ ಪುರಾವೆಗಳು ಕಂಡುಬಂದಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಆದರೆ ಮಕ್ಕಳಿಗೆ ಲಸಿಕೆ ಹಾಕದೇ ಇರುವವರೆಗೆ ಆತಂಕ ಇದೆ. ಅಷ್ಟೇ ಅಲ್ಲದೆ, ಈಗಿರುವ ವೈದ್ಯಕೀಯ ಸೌಲಭ್ಯಗಳು ಅಸಮರ್ಪಕವಾಗಿ ಉಳಿದಿವೆ ಎಂದು ಹೇಳಿದೆ.
ಎನ್ಐಡಿಎಂ ವರದಿ: "ಮೂರನೇ ಅಲೆಯ ನಿಯಂತ್ರಣಕ್ಕೆ ಬೇಕಾದ, ಮುಖ್ಯವಾಗಿ ಮಕ್ಕಳ ಚಿಕಿತ್ಸೆಗೆ ಬೇಕಾಗಿರುವ ಸೌಲಭ್ಯಗಳಾದ ವೆಂಟಿಲೇಟರ್‌ಗಳು, ಆ್ಯಂಬುಲೆನ್ಸ್‌ಗಳು, ವೈದ್ಯರು ಮತ್ತು ಉಪಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಇದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ತಯಾರಿ ಮಾಡಬೇಕು" ಎಂದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್ಐಡಿಎಂ ಶಿಫಾರಸುಗಳ ವರದಿಯ ಭಾಗವಾಗಿ ಹೇಳಿದೆ.