ಅಯೋಧ್ಯೆ:ಇಲ್ಲಿಯವರೆಗೆ 25 ಸಾವಿರಕ್ಕೂ ಅಧಿಕ ಅನಾಥ ಶವಗಳ ಅಂತ್ಯಕ್ರಿಯೆ ನಡೆಸಿರುವ 80 ವರ್ಷದ ಉತ್ತರ ಪ್ರದೇಶದ ಫೈಜಾಬಾದ್ನ ಮೊಹಮ್ಮದ್ ಶರೀಫ್ಗೆ ಪ್ರಧಾನಿ ಕಚೇರಿಯಿಂದ ಸಹಾಯದ ಭರವಸೆ ಸಿಕ್ಕಿದೆ.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶರೀಫ್ ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡಿ ಮುಕ್ತಿ ನೀಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಶರೀಫ್ ಅವರಿಗೆ 2020ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿತ್ತು. ಆದರೆ, ಇಲ್ಲಿಯವರೆಗೆ ಆ ಪ್ರಶಸ್ತಿ ಲಭ್ಯವಾಗಿರಲಿಲ್ಲ. ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಸೇರಿ ಅನೇಕ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡಿತ್ತು.
ಇದನ್ನೂ ಓದಿ: 27 ವರ್ಷ ಅನಾಥ ಶವಗಳ ಅಂತ್ಯಸಂಸ್ಕಾರ ಮಾಡಿದ ಶರೀಫ್ಗೆ ಬೇಕಿದೆ ಆಸರೆ... ಪದ್ಮಶ್ರೀ ಘೋಷಣೆಯಾದ್ರೂ ಇನ್ನೂ ಸಿಕ್ಕಿಲ್ಲ ಪುರಸ್ಕಾರ!
ವರದಿಯಿಂದ ಎಚ್ಚೆತ್ತುಕೊಂಡಿರುವ ಪ್ರಧಾನಿ ಕಚೇರಿ ಇದೀಗ ಅನಾರೋಗ್ಯ ಪೀಡಿತರಾಗಿರುವ ಮೊಹಮ್ಮದ್ ಶರೀಫ್ಗೆ ಮನೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸುವ ಭರವಸೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಧ್ಯಮ ಉಸ್ತುವಾರಿ ಡಾ. ರಜ್ನೀಶ್ ಸಿಂಗ್ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದ್ದು, ಅವರಿಗೆ ಸಹಾಯ ಮಾಡುವ ಭರವಸೆ ಸಿಕ್ಕಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶರೀಫ್ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಶರೀಫ್ ಅವರಿಗೆ ಶೀಘ್ರದಲ್ಲೇ ಮನೆ ಹಾಗೂ ಜೀವನೋಪಾಯಕ್ಕಾಗಿ ಪಿಂಚಣಿ ನೀಡಲಾಗುವುದು ಎಂದು ಹೇಳಲಾಗಿದ್ದು, ಈಗಾಗಲೇ ಅಯೋಧ್ಯೆ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಅವರ ಆರೋಗ್ಯ ವಿಚಾರಣೆ ನಡೆಸಲಾಗಿದೆ. ಇದೀಗ ಲಖನೌ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಲುವಾಗಿ ದಾಖಲು ಮಾಡುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರದ ಸಹಾಯಕ್ಕಾಗಿ ಕಾಯಲಾಗುತ್ತಿದೆ. ಕಳೆದ ಐದು ತಿಂಗಳಿಂದ ಇವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಹಾಸಿಗೆ ಹಿಡಿದಿದ್ದಾರೆ.
ಕಳೆದ ವರ್ಷ ಪದ್ಮಶ್ರೀ ಘೋಷಣೆಯಾಗಿದ್ದು, ಇಲ್ಲಿಯವರೆಗೆ ಅದು ಸಿಕ್ಕಿಲ್ಲ. ಜತೆಗೆ ವಾಸಿಸಲು ಸ್ವಂತ ಮನೆ ಇಲ್ಲ. ಒಂದು ಸಣ್ಣ ಬಾಡಿಗೆ ಮನೆಯಲ್ಲಿ 20 ಸದಸ್ಯರು ವಾಸ ಮಾಡುತ್ತಿದ್ದಾರೆ. ಮೊಹಮ್ಮದ್ ಶರೀಫ್ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ 2020ರ ಗಣರಾಜ್ಯೋತ್ಸವ ದಿನದಿಂದ ಪದ್ಮಶ್ರೀ ಘೋಷಣೆ ಮಾಡಿತ್ತು.