ಜೈಪುರ(ಒಡಿಶಾ):ಕೋವಿಡ್ ಸೋಂಕಿಗೊಳಗಾಗಿ ನವೆಂಬರ್ 30ರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 104 ವರ್ಷದ ಪದ್ಮಶ್ರೀ ಪುರಸ್ಕೃತ ನಂದಾ ಸರ್ ಖ್ಯಾತಿಯ ನಂದಕಿಶೋರ್ ಪ್ರಸ್ಟಿ ವಿಧಿವಶರಾಗಿದ್ದಾರೆ.
2020ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಇವರು, ತಮ್ಮ ಊರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಂದಾ ಮಾಸ್ಟರ್ ಚತ್ಸಾಲಿ ಎಂದೇ ಚಿರಪರಿಚಿತರಾಗಿದ್ದರು. ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಪಾಠ ಮಾಡುತ್ತಿದ್ದರು. ಗ್ರಾಮದಲ್ಲಿ ಅನಕ್ಷರತೆಯನ್ನು ನಿರ್ಮೂಲನೆ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದ ಇವರು, 100ರ ಹರೆಯದಲ್ಲೂ ಮರದ ಕೆಳಗೆ ಕುಳಿತು ಮಕ್ಕಳಿಗೆ ಪಾಠ ಹೇಳುವ ಕಾರ್ಯ ಮುಂದುವರೆಸಿದ್ದರು.