ನವದೆಹಲಿ:ಕರ್ನಾಟಕದ ಹಿರಿಯ ಸಾಹಿಚಿ ಎಸ್.ಎಲ್.ಭೈರಪ್ಪ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಹಾಗು ಲೇಖಕಿ ಸುಧಾ ಮೂರ್ತಿ ಅವರಿಗೆ ದೇಶದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಸೇರಿದಂತೆ ಅನೇಕ ಗಣ್ಯರಿಗೆ ಇಂದು ಸಂಜೆ ಪದ್ಮವಿಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು.
ಗಣರಾಜ್ಯೋತ್ಸವ ಸಂದರ್ಭದಲ್ಲಿ ಜನವರಿಯಲ್ಲಿ 106 ಗಣ್ಯರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಲಾಗಿತ್ತು. ಮಾರ್ಚ್ 22ರಂದು ಮೊದಲ ಹಂತದಲ್ಲಿ ಸುಮಾರು 50 ಮಂದಿ ಪುರಸ್ಕೃತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ಇಂದು ಒಟ್ಟು 53 ಮಂದಿ ಗಣ್ಯರಿಗೆ ಪದ್ಮ ಪುರಸ್ಕಾರಗಳನ್ನು ರಾಷ್ಟ್ರಪತಿ ಪ್ರದಾನ ಮಾಡಿದರು. ಮೂವರಿಗೆ ಪದ್ಮವಿಭೂಷಣ, ಐವರಿಗೆ ಪದ್ಮಭೂಷಣ ಹಾಗೂ 45 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಪುರಸ್ಕೃತರಾದ ಎಸ್.ಎಲ್.ಭೈರಪ್ಪ ಮತ್ತು ಸುಧಾ ಮೂರ್ತಿ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಖಾದರ್ ವಲ್ಲಿ ದುಡೇಕುಲಾ, ಕಲಾ ವಿಭಾಗದಲ್ಲಿ ಶಾ ರಶೀದ್ ಅಹ್ಮದ್ ಖಾದ್ರಿ ಮತ್ತು ರಾಣಿ ಮಾಚಯ್ಯ ಪದ್ಮಶ್ರೀ ಪ್ರಶಸ್ತಿ ಪಡೆದರು. ‘ಆರ್‌ಆರ್‌ಆರ್’ ಚಿತ್ರದ ಹಾಡಿನ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಹಾಗೂ ಬಾಲಿವುಡ್ ನಟಿ ರವೀನಾ ಟಂಡನ್ ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಪ್ರಮುಖರು.