ನವದೆಹಲಿ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪುರಸ್ಕಾರಗಳನ್ನು ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. ಒಟ್ಟು 106 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಇದರಲ್ಲಿ ಆರು ಪದ್ಮವಿಭೂಷಣ, ಒಂಭತ್ತು ಪದ್ಮಭೂಷಣ ಮತ್ತು 91 ಪದ್ಮಶ್ರೀಗಳನ್ನು ಪ್ರಕಟಿಸಲಾಗಿದೆ.
ರಾಜ್ಯದ ಎಂಟು ಜನರಿಗೆ ಗೌರವ.. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ, ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ, ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಅಲ್ಲದೇ, ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಖಾದರ್ ವಲ್ಲಿ ದುಡೇಕುಲಾ ಹಾಗೂ ಕಲಾ ವಿಭಾಗದಲ್ಲಿ ರಾಣಿ ಮಾಚಯ್ಯ, ನಾಡೋಜ ಪಿಂಡಿಪನಹಳ್ಳಿ ಮುನಿವೆಂಕಟಪ್ಪ, ಶಾ ರಶೀದ್ ಅಹ್ಮದ್ ಖಾದ್ರಿ ಮತ್ತು ಪುರಾತತ್ವ ಕ್ಷೇತ್ರದಲ್ಲಿ ಎಸ್.ಸುಬ್ಬರಾಮನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ದಿ. ಮುಲಾಯಂ ಸಿಂಗ್ ಯಾದವ್ ಅವರಿಗೂ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ನಿರಾಶ್ರಿತರ ಶಿಬಿರಗಳಲ್ಲಿ ಸೇವೆ ಸಲ್ಲಿಸಿದ ದಿಲೀಪ್ ಮಹಲನಾಬಿಸ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ದಿಲೀಪ್ ಮಹಾಲನಬಿಸ್ ಅವರಿಗೆ (ಮರಣೋತ್ತರ) ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಅದೇ ರೀತಿ ಪಶ್ಚಿಮ ಬಂಗಾಳದ 102 ವರ್ಷದ ಆಟಗಾರ್ತಿ ಮಂಗಳಾ ಕಾಂತಿ ರಾಯ್, 98 ವರ್ಷದ ಸಾವಯವ ಕೃಷಿಕ ತುಲಾ ರಾಮ ಉಪ್ರೇಟಿ, ರತನ್ ಚಂದ್ರ ಕರ್, ಹೀರಾಬಾಯಿ ಲೋಬಿ, ಮುನೀಶ್ವರ್ ಚಂದರ್ ದಾವರ್, ಮುನೀಶ್ವರ್ ಚಂದರ್ ದಾವರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
19 ಮಹಿಳೆಯರಿಗೆ ಪದ್ಮ ಪುರಸ್ಕಾರ:ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಮೂರು ವಿಭಾಗದಲ್ಲಿ ಒಟ್ಟಾರೆ ಪ್ರಶಸ್ತಿ ಪುರಸ್ಕೃತರಲ್ಲಿ 19 ಮಹಿಳೆಯರು ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮತ್ತೊಂದೆಡೆ ವಿದೇಶಿಯರು, ಎನ್‌ಆರ್‌ಐ, ಪಿಐಒ, ಒಸಿಐ ವಿಭಾಗದಲ್ಲಿ ಇಬ್ಬರಿಗೆ ಪದ್ಮ ಗೌರವ ನೀಡಲಾಗಿದೆ. ಮರಣೋತ್ತರವಾಗಿ ಏಳು ಜನ ಪ್ರಮುಖರಿಗೆ ಪ್ರಶಸ್ತಿ ಘೋಷಿಸಲಾಗಿದೆ.