ನವದೆಹಲಿ: ಕೋವಿಡ್ ಸೋಂಕು ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರಿಗೆ ಆಮ್ಲಜನಕದ ಕೊರತೆ ಎದುರಾಗಿದೆ. ದೆಹಲಿ ನಗರಾದ್ಯಂತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ತರ್ತು ಆಮ್ಲಜನಕದ ಅವಶ್ಯತೆಯಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಆಮ್ಲಜನಕದ ಕೊರತೆಯ ಬಗ್ಗೆ ಹಲವು ಆಸ್ಪತ್ರೆಗಳಿಂದ ಕರೆಗಳು ಬರುತ್ತಿವೆ. ಕೆಲವರಿಗೆ ತುರ್ತಾಗಿ ಆಮ್ಲಜನಕ ಬೇಕಾಗಿದೆ ಎಂದು ದೆಹಲಿಯ ಕೋವಿಡ್ ನಿರ್ವಹಣಾ ನೋಡಲ್ ಸಚಿವರು ಕೂಡ ಆಗಿರುವ ಸಿಸೋಡಿಯಾ ತಿಳಿಸಿದ್ದಾರೆ.
"ದೆಹಲಿಯ ಅನೇಕ ಆಸ್ಪತ್ರೆಗಳಲ್ಲಿ ಮುಂದಿನ 8-12 ಗಂಟೆಗಳವರೆಗೆ ಸಾಕಾಗುವಷ್ಟು ಮಾತ್ರ ಆಮ್ಲಜನಕ ಲಭ್ಯವಿದೆ. ನಮಗೆ ಆಮ್ಲಜನಕ ಪೂರೈಕೆ ಕೋಟಾವನ್ನು ಹೆಚ್ಚಿಸಲು ನಾವು ಒಂದು ವಾರದಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ನಾಳೆ ಬೆಳಗ್ಗೆ ವೇಳೆಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಆಸ್ಪತ್ರೆಗಳಿಗೆ ತಲುಪದಿದ್ದರೆ ಪರಿಸ್ಥಿತಿ ಹದೆಗೆಡಲಿದೆ" ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.