ಹೈದರಾಬಾದ್:ಇಲ್ಲಿನ ಕಿಂಗ್ ಕೋಟಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಮೂವರು ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. ಕಳೆದ 20 ಗಂಟೆಗಳಿಂದ ಈ ಆಸ್ಪತ್ರೆಯಲ್ಲಿ ಆಮ್ಲಜನಕ ಸಮಸ್ಯೆ ಉದ್ಭವವಾಗಿತ್ತು ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಆಮ್ಲಜನಕ ಹೊತ್ತು ತರಬೇಕಾಗಿದ್ದ ವಾಹನ ವಿಳಾಸ ಗೊತ್ತಿಲ್ಲದ ಕಾರಣ ಉಸ್ಮಾನಿಯಾ ಆಸ್ಪತ್ರೆಗೆ ತೆರಳಿದೆ. ಆಗ ಅಲ್ಲಿನ ಸಿಬ್ಬಂದಿ ಟ್ಯಾಂಕರ್ನ್ನ ಕಿಂಗ್ ಕೋಟಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆಕ್ಸಿಜನ್ ಸಿಲಿಂಡರ್ ವಾಹನ ಕಿಂಗ್ ಕೋಟಿ ಆಸ್ಪತ್ರೆಗೆ ಬರುವ ಹೊತ್ತಿಗೆ ಮೂವರು ಕೋವಿಡ್ ರೋಗಿಗಳ ಪ್ರಾಣ ಹಾರಿಹೋಗಿದೆ.
ಇದನ್ನೂ ಓದಿ: ವೈದ್ಯಕೀಯ ಸಲಕರಣೆ ಮೇಲಿನ ತೆರಿಗೆ ಈಗಾಗಲೇ ರದ್ದಾಗಿವೆ: ದೀದಿಗೆ ಸೀತಾರಾಮನ್ ತಿರುಗೇಟು
ಆಸ್ಪತ್ರೆಗೆ ದಾಖಲಾಗಿದ್ದ ಅನೇಕ ರೋಗಿಗಳು ಆಕ್ಸಿಜನ್ ಸಮಸ್ಯೆಯಿಂದ ತೊಂದರೆ ಅನುಭವಿಸಿದ್ದಾರೆಂದು ಸಂಬಂಧಿಕರು ದೂರಿದ್ದಾರೆ. ಸ್ಥಳಕ್ಕೆ ಆಮ್ಲಜನಕ ಹೊತ್ತು ಟ್ಯಾಂಕರ್ ಬರುತ್ತಿದ್ದಂತೆ ಪೂರೈಕೆ ಪ್ರಾರಂಭಿಸಲಾಗಿದೆ ಎಂದು ಅಲ್ಲಿನ ವೈದ್ಯಕೀಯ ಆಡಳಿತ ಮಂಡಳಿ ಮಾಹಿತಿ ನೀಡಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಮ್ಲಜನಕದ ಸಿಲಿಂಡರ್ಗಳು ಖಾಲಿ ಆಗುವವರೆಗೆ ಸುಮ್ಮನಿದ್ದು ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.