ಚಂದೌಲಿ (ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಭಾರಿ ಅವಘಡವೊಂದು ಸಂಭವಿಸಿದೆ. ಮೊಘಲ್‌ಸರಾಯ್‌ನ ರವಿ ನಗರ ಪ್ರದೇಶದ ದಯಾಳ್ ಆಸ್ಪತ್ರೆಯ ಹೊರಗೆ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡಿದೆ. ಪರಿಣಾಮ ಇಬ್ಬರು ಸಾವಿಗೀಡಾಗಿದ್ದಾರೆ. ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ ಇಬ್ಬರ ದೇಹದ ಹಲವು ಭಾಗಗಳು ಅಲ್ಲೊಂದು ಇಲ್ಲೊಂದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಫೋಟದ ಸದ್ದು ಕೇಳಿ ಸುತ್ತಮುತ್ತಲಿನವರೂ ಭಯಗೊಂಡಿದ್ದಾರೆ.
ಸಿಲಿಂಡರ್ ತುಂಬಿದ ವಾಹನಕ್ಕೆ ಟ್ರ್ಯಾಕ್ಟರ್ ಡಿಕ್ಕಿ: ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ರವಿವನಗರದ ದಯಾಳ್ ಆಸ್ಪತ್ರೆಯ ಹೊರಗೆ ಆಮ್ಲಜನಕದ ಸಿಲಿಂಡರ್ ತುಂಬಿರುವ ವಾಹನ ನಿಂತಿತ್ತು ಎಂದು ಹೇಳಲಾಗುತ್ತಿದೆ. ಕೆಲವರು ಸಿಲಿಂಡರ್ ಇಳಿಸುತ್ತಿದ್ದರು. ಅದೇ ವೇಳೆ, ಟ್ರ್ಯಾಕ್ಟರ್ನ ಟ್ರಾಲಿ ಈ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ತುಂಬಿದ ಸಿಲಿಂಡರ್ ಕೆಳಗೆ ಬಿದ್ದು ದೊಡ್ಡ ಸದ್ದಿನೊಂದಿಗೆ ಸ್ಫೋಟಗೊಂಡಿದೆ.
ಈ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ತಕ್ಷಣ ಸಿಒ ಅನಿರುದ್ಧ್ ಸಿಂಗ್ ಮತ್ತು ಕೊತ್ವಾಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಹ ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸದ್ಯ ಇಬ್ಬರ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ನಾಪತ್ತೆಯಾಗಿದ್ದಾನೆ. ಅವನೂ ಅಪಘಾತದಲ್ಲಿ ಸತ್ತಿದ್ದಾನೋ ಅಥವಾ ಓಡಿ ಹೋಗಿದ್ದಾನೋ ಗೊತ್ತಿಲ್ಲ. ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ:ರಸ್ತೆ ಬದಿ ಹೂತಿಟ್ಟ ಬಾಂಬ್ ಸ್ಫೋಟ: ಬಸ್ ಛಿದ್ರ ಛಿದ್ರ 10 ಮಂದಿ ಸಾವು
ಮುನ್ನೆಚ್ಚರಿಕೆ ಅಗತ್ಯ:ತಜ್ಞರ ಪ್ರಕಾರ, ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸುವಾಗ ಮತ್ತು ತುಂಬುವಾಗ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಮಾರಣಾಂತಿಕವಾಗಬಹುದು. ತುಂಬಿರುವ ಸಿಲಿಂಡರ್ ಸೋರಿಕೆಯಾಗುವ ಸಂಭವವಿದ್ದು, ಯಾವುದೇ ಅಹಿತಕರ ಘಟನೆಯಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯೂ ಇದೆ. ಆಕ್ಸಿಜನ್ ಸಿಲಿಂಡರ್ ಇಡುವ ಜಾಗದಲ್ಲಿ ಉರಿಯುವ ಯಾವುದೇ ವಸ್ತುವನ್ನು ಇಡಬಾರದು ಎನ್ನುತ್ತಾರೆ ತಜ್ಞರು. ಅಲ್ಲದೆ, ಸಿಲಿಂಡರ್ ಅನ್ನು ಸಾಗಿಸುವಾಗ, ಅದನ್ನು ನೆಲಕ್ಕೆ ಬೀಳಿಸಬಾರದು.