ಲಕ್ನೋ: ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ರಾಕೇಶ್ ಟಿಕಾಯತ್ ಅವರು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ಭಾರತೀಯ ಜನತಾ ಪಕ್ಷದ ಚಿಕ್ಕಪ್ಪ ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಂತೆ ಪೌರತ್ವ (ತಿದ್ದುಪಡಿ) ಕಾಯಿದೆ, 2019 (ಸಿಎಎ) ಅನ್ನು ರದ್ದುಗೊಳಿಸುವಂತೆ ಓವೈಸಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಹಿನ್ನೆಲೆ ಈ ಹೇಳಿಕೆ ನೀಡಿದ್ದಾರೆ.
ಎಐಎಂಐಎಂ ಮತ್ತು ಬಿಜೆಪಿ ಚಿಕ್ಕಪ್ಪ ಹಾಗೂ ಸೋದರಳಿಯನಂತೆ. ಓವೈಸಿ ಬಿಜೆಪಿಯ ಚಿಕ್ಕಪ್ಪ ಇದ್ದಂತೆ, ಅವರು ಏನು ಬೇಕಾದರೂ ಹೇಳಿಕೊಳ್ಳಲಿ, ಓವೈಸಿ ಹೇಳಿದ್ದನ್ನ ಬಿಜೆಪಿ ಮಾಡುತ್ತೆ, ಇದು ಅವರ ಮನೆಯ ವಿಷಯ ಮತ್ತು ಅವರು ಅದನ್ನು ಪರಿಹರಿಸಿಕೊಳ್ಳಬಹುದು ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರವು ರೈತರನ್ನು ವಿಭಜಿಸುತ್ತಿದೆ. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಎಂಎಸ್‌ಪಿ ಗ್ಯಾರಂಟಿ ಕಾಯ್ದೆಯನ್ನು ಜಾರಿಗೆ ತರಲು ಶಿಫಾರಸು ಮಾಡಿದ್ದರು. ಹಾಗಾದರೆ ಪ್ರಧಾನಿ ಈಗ ಏಕೆ ಸಮಿತಿಯನ್ನು ರಚಿಸುತ್ತಿದ್ದಾರೆ? ಎಂಎಸ್‌ಪಿ ಗ್ಯಾರಂಟಿ ಕಾಯ್ದೆಯನ್ನು ಏಕೆ ಜಾರಿಗೆ ತರುತ್ತಿಲ್ಲ ಎಂದು ಟಿಕಾಯತ್ ಪ್ರಶ್ನಿಸಿದ್ದಾರೆ.
ರೈತರ ಬೇಡಿಕೆಗಳು ಇನ್ನೂ ಅಂಗೀಕಾರವಾಗದ ಕಾರಣ ರೈತರ ಧರಣಿ ನಿಲ್ಲಿಸುವುದಿಲ್ಲ. ಎಂಎಸ್‌ಪಿ , ಹಾಲಿನ ನೀತಿಯಂತಹ ನಮ್ಮ ಹಲವು ಸಮಸ್ಯೆಗಳು ಇನ್ನೂ ಬಗೆಹರಿಯದ ಕಾರಣ ಆಂದೋಲನವನ್ನು ನಿಲ್ಲಿಸಲಾಗುವುದಿಲ್ಲ. ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಬೇಕು. ಇಲ್ಲದಿದ್ದರೆ ಮನೆಗೆ ಹೋಗುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.