ಲಖನೌ(ಉತ್ತರ ಪ್ರದೇಶ):ಪಂಚರಾಜ್ಯಗಳ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಂಡಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ. ಈ ಬೆನ್ನಲ್ಲೇ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿಚಿತ್ರ ಭರವಸೆಯೊಂದನ್ನು ನೀಡಿದ್ದಾರೆ.
ಚುನಾವಣೆಯಲ್ಲಿ ಗೆಲುವಿಗಾಗಿ ಶನಿವಾರ 'ಭಾಗಿದಾರಿ ಪರಿವರ್ತನ್ ಮೋರ್ಚಾ'ವನ್ನು ಆರಂಭಿಸಿರುವ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದಲ್ಲಿ ಮೈತ್ರಿ ಪಕ್ಷವು ಅಧಿಕಾರಕ್ಕೆ ಬಂದರೆ, ಇಬ್ಬರು ಮುಖ್ಯಮಂತ್ರಿಗಳನ್ನು ನಿಯೋಜಿಸುವ ಭರವಸೆಯನ್ನು ನೀಡಿದ್ದಾರೆ.
ಭಾಗಿದಾರಿ ಪರಿವರ್ತನ್ ಮೋರ್ಚಾ ವಿವಿಧ ಪಕ್ಷಗಳ ಮೈತ್ರಿಕೂಟವಾಗಿದ್ದು, ಈ ಹೊಸ ಮೈತ್ರಿಕೂಟ ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದು, ಒಂದು ವೇಳೆ ಅಧಿಕಾರಕ್ಕೆ ಬಂದರೆ, ಇಬ್ಬರು ಸಿಎಂಗಳು ಮತ್ತು ಮೂವರು ಡಿಸಿಎಂಗಳನ್ನು ನಿಯೋಜಿಸುವುದಾಗಿ ಓವೈಸಿ ಹೇಳಿದ್ದಾರೆ.
ಇಬ್ಬರು ಸಿಎಂಗಳ ಪೈಕಿ ಒಬ್ಬರು ಹಿಂದುಳಿದ ವರ್ಗಗಳಿಗೆ ಮತ್ತು ಇನ್ನೊಬ್ಬರು ದಲಿತ ಸಮುದಾಯಕ್ಕೆ ಸೇರಿರುತ್ತಾರೆ. ಇನ್ನು ಮೂವರು ಡಿಸಿಎಂಗಳಲ್ಲಿ ಒಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ ಎಂದು ಓವೈಸಿ ಭರವಸೆ ನೀಡಿದ್ದಾರೆ. ಆದರೆ ಸಂವಿಧಾನದಲ್ಲಿ ಒಂದು ರಾಜ್ಯಕ್ಕೆ ಒಂದು ಸಿಎಂ ಸ್ಥಾನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.