ಸೂರತ್ (ಗುಜರಾತ್):ದೀಪಾವಳಿ ಹಬ್ಬ ಹಾಗೂ ಛತ್ ಹಬ್ಬಕ್ಕಾಗಿ ವಲಸೆ ಕಾರ್ಮಿಕರು ಊರಿಗೆ ಹೋಗುವ ಅವಸರದಲ್ಲಿದ್ದಾರೆ. ಶನಿವಾರ ಬೆಳಗ್ಗೆ ಸೂರತ್ನ ರೈಲು ನಿಲ್ದಾಣದಲ್ಲಿ ಸೇರಿದ್ದ ಪ್ರಯಾಣಿಕರು ರೈಲಿಗೆ ಏರುವ ಧಾವಂತದಲ್ಲಿ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮಹಿಳೆ ಸೇರಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂರತ್ ರೈಲು ನಿಲ್ದಾಣದಿಂದ ಭಾಗಲ್ಪುರಕ್ಕೆ ಹೋಗುವ ವಿಶೇಷ ರೈಲು ಏರುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ನೂಕುನುಗ್ಗಲಿನಲ್ಲಿ ಹಲವರಿಗೆ ಉಸಿರುಗಟ್ಟಿದಂತಾಗಿದ್ದು, ಕೆಲವರಿಗೆ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಸಕಾಲದಲ್ಲಿ ಸಿಪಿಆರ್ ವ್ಯವಸ್ಥೆ ಮಾಡಿದ್ದಾರೆ. ವಾರಾಂತ್ಯ ಹಾಗೂ ಜೊತೆಗೆ ಹಬ್ಬ ಹರಿದಿನಗಳಿಗಾಗಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುವ ತಯಾರಿಯಲ್ಲಿದ್ದು, ರೈಲು ನಿಲ್ದಾಣದಲ್ಲಿ ಜನಸಂದಣಿ ಉಂಟಾಗಿತ್ತು.
ಮೃತರನ್ನು ಬಿಹಾರದ ಭಾಗಲ್ಪುರದ ನಿವಾಸಿ ಅಂಕಿತ್ ವೀರೇಂದ್ರ ಕುಮಾರ್ ಸಿಂಗ್ ಹಾಗೂ ಗಾಯಾಳುಗಳನ್ನು ಅವರ ಸಹೋದರ ರಾಮ್ ಪ್ರಕಾಶ್ ವೀರೇಂದ್ರ ಕುಮಾರ್ ಸಿಂಗ್ ಹಾಗೂ ಮಹಿಳೆ ಸುಯಿಜಾ ಸಿಂಗ್ ಎಂದು ಗುರುತಿಸಲಾಗಿದೆ. ಸಹೋದರರಿಬ್ಬರೂ ಕೆಲಸದ ನಿಮಿತ್ತ ಸೂರತ್ನ ಲಾಲ್ ದರ್ವಾಜಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಹಬ್ಬಕ್ಕಾಗಿ ಊರಿಗೆ ಹೊರಟಿದ್ದರು. ಉತ್ತರ ಪ್ರದೇಶದ ಚಿತ್ರಕೂಟ್ನ ನಿವಾಸಿಯಾದ ಸುಯಿಜಾ ಸಿಂಗ್ ಸರೋಲಿ ಪ್ರದೇಶದಲ್ಲಿ ನೆಲೆಸಿದ್ದರು. ಸುಯಿಜಾ ಹಾಗೂ ರಾಮ್ ಪ್ರಕಾಶ್ ಅವರು ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಒಡಿಶಾ ಮತ್ತು ಜಾರ್ಖಂಡ್ನಿಂದ ಬಂದ ಅನೇಕ ವಲಸೆ ಕಾರ್ಮಿಕರು ಸೂರತ್ನ ಜವಳಿ ಹಾಗೂ ವಜ್ರದ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರದಿಂದ ಹಬ್ಬದ ನಿಮಿತ್ತ ಉದ್ಯಮಗಳು ರಜೆ ಘೋಷಿಸಿದ್ದರಿಂದ ಕಾರ್ಮಿಕರು ತಮ್ಮ ಊರುಗಳಿಗೆ ಹೋಗುವ ತರಾತುರಿಯಲ್ಲಿದ್ದಾರೆ. ಶನಿವಾರ ಬೆಳಗ್ಗೆ 5000 ಕ್ಕೂ ಹೆಚ್ಚು ಪ್ರಯಾಣಿಕರು ಸೂರತ್ ರೈಲು ನಿಲ್ದಾಣದ ಫ್ಲಾಟ್ಫಾರ್ಮ್ ಸಂಖ್ಯೆ 4ರಲ್ಲಿ ರೈಲನ್ನೇರಲು ಜಮಾಯಿಸಿದ್ದರು. ಸೂರತ್- ಭಾಗಲ್ಪುರ್ ಎಕ್ಸ್ಪ್ರೆಸ್ ರೈಲಿನ ಕೋಚ್ಗಳನ್ನು ಏರಲು ಹೆಣಗಾಡುತ್ತಿದ್ದ ದೃಶ್ಯ ಕಂಡು ಬಂದಿದೆ ಎಂದು ವರದಿಯಾಗಿವೆ.
ರೈಲಿನಲ್ಲಿ 1500 ಪ್ರಯಾಣಿಕರು ಕುಳಿತುಕೊಳ್ಳಬಹುದು. ಆದರೆ ಹೆಚ್ಚಿನ ಆಗಮಿಸುತ್ತಿರುವುದರಿಂದ ಒಬ್ಬರನ್ನೊಬ್ಬರು ತಳ್ಳಿಕೊಂಡು ಪ್ರವೇಶಿಸಲು ಪ್ರಯತ್ನಿಸುತ್ತಾರೆ. ಕೆಲವರು ಒಡೆದ ಕಿಟಕಿಗಳ ಮೂಲಕವೂ ಒಳ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಜನದಟ್ಟಣೆಯಿಂದಾಗಿ ರೈಲಿನ ಸ್ಲೀಪರ್ ಕೋಚ್ಗಳಲ್ಲಿ ಒಂದಾದ S7 ನಲ್ಲಿ ಕಾಲ್ತುಳಿತ ಉಂಟಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಸಾಮಾನ್ಯ ಕೋಚ್ನಲ್ಲಿ ಪ್ರಯಾಣಿಸಲು ಪ್ರಯಾಣಿಕರು 48 ಗಂಟೆಗಳ ಮುಂಚಿತವಾಗಿ ಸೂರತ್ ರೈಲು ನಿಲ್ದಾಣಕ್ಕೆ ಬರುತ್ತಿದ್ದಾರೆ. ಹಾಗಾಗಿ ನಿಲ್ದಾಣದಲ್ಲಿ ಜನರಿಗೆ ಹೆಜ್ಜೆ ಹಾಕಲು ಜಾಗವಿಲ್ಲದ ಪರಿಸ್ಥಿತಿ ಉಂಟಾಗಿದೆ. 1500 ಆಸನಗಳಿರುವ ರೈಲಿಗೆ 5000ಕ್ಕೂ ಹೆಚ್ಚು ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಸೂರತ್ ರೈಲು ನಿಲ್ದಾಣದಲ್ಲಿ ಇದೇ ಪರಿಸ್ಥಿತಿ ಇದೆ. ಭಾರೀ ಜನಸಂದಣಿಯಿಂದಾಗಿ ಕೆಲವು ಪ್ರಯಾಣಿಕರು ಉಸಿರುಗಟ್ಟಿದಂತಾಗಿ ಪ್ರಜ್ಞಾಹೀನರಾಗುತ್ತಿದ್ದಾರೆ. ಮತ್ತೊಂದೆಡೆ ಜನರನ್ನು ನಿಯಂತ್ರಿಸಲು ರೈಲ್ವೆ ನಿಲ್ದಾಣದಲ್ಲಿ ಆರ್ಪಿಎಫ್ ಸಿಬ್ಬಂದಿ ಸಂಖ್ಯೆಯೂ ಸೀಮಿತವಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.
ರೈಲ್ವೆ ಸಾರ್ವಜನಿಕ ಅಧಿಕಾರಿ ಸುಮಿತ್ ಠಾಕೂರ್ ಮಾತನಾಡಿ, ಹಬ್ಬದ ಋತು ಇರುವುದನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ರೈಲ್ವೆ ಹೆಚ್ಚುವರಿಯಾಗಿ 46 ರೈಲುಗಳನ್ನು ಪ್ರಾರಂಭಿಸಿದೆ. ಇದರಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಗೆ ರೈಲುಗಳು ಸಂಚರಿಸುತ್ತವೆ. 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ರೈಲುಗಳ ಪ್ರಯೋಜನ ಪಡೆಯುತ್ತಿದ್ದಾರೆ. ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಸೂರತ್ ಹಾಗೂ ಉದ್ನಾ ರೈಲು ನಿಲ್ದಾಣದಲ್ಲಿ ವಿಶೇಷ ರೈಉಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಸೂರತ್ ನಿಲ್ದಾಣದಲ್ಲಿ ಸುಮಾರು 165 ಆರ್ಪಿಎಫ್ ಹಾಗೂ ಜಿಆರ್ಪಿಎಫ್ ಸಿಬ್ಬಂದಿಯನ್ನು, ಉದ್ನಾ ರೈಲು ನಿಲ್ದಾಣದಲ್ಲಿ ಸುಮಾರು 100 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಕೌಂಟರ್ಗಳನ್ನೂ ಆರಂಭಿಸಿದ್ದೇವೆ. ಸೂರತ್ ನಿಲ್ದಾಣದಲ್ಲಿ ಉಸಿರಾಟದ ತೊಂದರೆ ಕಂಡು ಬಂದ ಮೂವರು ಪ್ರಯಾಣಿಕರಿಗೆ ತಕ್ಷಣ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ದೆಹಲಿ - ಜೈಪುರ್ ಎಕ್ಸ್ಪ್ರೆಸ್ ಹೈವೇಯಲ್ಲಿ ಹೊತ್ತಿ ಉರಿದ ಬಸ್: ಇಬ್ಬರು ಸಾವು, 12ಕ್ಕೂ ಹೆಚ್ಚು ಮಂದಿಗೆ ಗಾಯ