ನವದೆಹಲಿ :ಕಳೆದ ಆರು ವರ್ಷಗಳಲ್ಲಿ ಭಾರತದಿಂದ 3 ಲಕ್ಷ ಮಕ್ಕಳು ನಾಪತ್ತೆಯಾಗಿದ್ದಾರೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಸದನದಲ್ಲಿ ಮಾಹಿತಿ ನೀಡಿದರು. ಲಿಖಿತ ರೂಪದಲ್ಲಿ ಕೇಳಲಾಗಿರುವ ಪ್ರಶ್ನೆಗೆ ಕೇಂದ್ರ ಸಚಿವೆ ಉತ್ತರ ನೀಡಿದ್ದಾರೆ.
2015ರಿಂದ 2020ರ ಅವಧಿಯಲ್ಲಿ ಒಟ್ಟು 3,11,290 ಮಕ್ಕಳು ನಾಪತ್ತೆಯಾಗಿದ್ದಾರೆ. ಇದರಲ್ಲಿ 2,70,698 ಮಕ್ಕಳನ್ನ ಮರಳಿ ಪೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ದಿನ ಟ್ರ್ಯಾಕ್ ಚೈಲ್ಡ್ ಪೊರ್ಟಲ್ನಲ್ಲಿ ಮಕ್ಕಳು ನಾಪತ್ತೆ ಹಾಗೂ ಸಿಕ್ಕಿರುವ ಮಕ್ಕಳ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ಪೊಲೀಸ್ ಠಾಣೆಗಳು, ಬಾಲಾಪರಾಧಿ ನ್ಯಾಯ ಮಂಡಳಿಗಳು ಹಾಗೂ ಮಕ್ಕಳ ರಕ್ಷಣೆ ಸಂಘಟನೆಗಳು ಇದರಲ್ಲಿ ಮಾಹಿತಿ ನೀಡುತ್ತಿವೆ ಎಂದಿದ್ದಾರೆ.
2015ರಲ್ಲಿ ನಾಪತ್ತೆ ಪ್ರಕರಣಗಳ ಸಂಖ್ಯೆ 80,633 ಆಗಿತ್ತು. ಆದರೆ, 2020ರಲ್ಲಿ ಇದರ ಸಂಖ್ಯೆ 39,362ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸಚಿವೆ ಮಾಹಿತಿ ನೀಡಿದ್ದಾರೆ. 2019ರಲ್ಲಿ ಒಟ್ಟು 49,267 ಮಕ್ಕಳು ನಾಪತ್ತೆಯಾಗಿವೆ. ಅದರಲ್ಲಿ 44,289 ಮಕ್ಕಳನ್ನ ಪತ್ತೆ ಮಾಡಲಾಗಿದೆ. 2018ರಲ್ಲಿ 48,873 ಮಕ್ಕಳು ನಾಪತ್ತೆಯಾಗಿದ್ದಾರೆ. ಇದರಲ್ಲಿ 40,296 ಮಕ್ಕಳನ್ನ ಪತ್ತೆ ಮಾಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿರಿ:ಇಬ್ಬರು ಅಪ್ರಾಪ್ತೆಯರಿಗೆ ತಪ್ಪಾಗಿ ಕೋವಿಡ್ ವ್ಯಾಕ್ಸಿನ್ ಡೋಸ್.. ಆಸ್ಪತ್ರೆಗೆ ದಾಖಲು
2017ರಲ್ಲಿ 47,080 ಮಕ್ಕಳು ಅಪಹರಣಗೊಂಡಿದ್ದು, ಅದರಲ್ಲಿ 43,251 ಮಕ್ಕಳು ಪತ್ತೆಯಾಗಿದ್ದು, 2016ರಲ್ಲಿ 46,075 ಮಕ್ಕಳ ಪೈಕಿ 41,931 ಮಕ್ಕಳು ಸಿಕ್ಕಿದ್ದಾರೆ ಎಂಬ ಮಾಹಿತಿಯನ್ನ ನೀಡಿದ್ದಾರೆ. 2015ರಲ್ಲಿ 80,366 ಮಕ್ಕಳು ನಾಪತ್ತೆಯಾಗಿದ್ದು, ಇದರಲ್ಲಿ 66,711 ಮಕ್ಕಳು ಮರಳಿ ಪೋಷಕರ ಗೂಡು ಸೇರಿಕೊಂಡಿದ್ದಾರೆ ಎಂದು ಸದನದಲ್ಲಿ ಮಾಹಿತಿ ಹಂಚಿಕೊಂಡರು.