ನವದೆಹಲಿ: ದೇಶದಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯಗಳು, ಐಐಟಿಗಳು ಮತ್ತು ಐಐಎಂಗಳಲ್ಲಿ 9 ಸಾವಿರಕ್ಕೂ ಅಧಿಕ ಬೋಧಕ ಹುದ್ದೆಗಳು ಖಾಲಿ ಉಳಿದಿವೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರದ ಶಿಕ್ಷಣ ಖಾತೆ ರಾಜ್ಯ ಸಚಿವ ಡಾ. ಸುಭಾಸ್ ಸರ್ಕಾರ, ಒಟ್ಟು 9 ಸಾವಿರ ಹುದ್ದೆಗಳು ಬಾಕಿ ಇವೆ ಎಂದಿದ್ದಾರೆ. ಇದರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 6,229 ಬೋಧಕ ಹುದ್ದೆ, ಐಐಟಿಗಳಲ್ಲಿ 3,230 ಹುದ್ದೆಗಳು ಮತ್ತು ಐಐಎಂಗಳಲ್ಲಿ 403 ಹುದ್ದೆಗಳು ಖಾಲಿ ಇವೆ ಎಂದು ತಿಳಿಸಿದ್ದಾರೆ. ಇದರ ಜೊತೆಗೆ 18,597 ಬೋಧಕೇತರ ಹುದ್ದೆಗಳು ಖಾಲಿ ಇರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.