ನವದೆಹಲಿ: ಜುಲೈ 1 ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ 492 ಸಂವಿಧಾನ ಪೀಠದಿಂದ ನಡೆಯಬೇಕಿರುವ ವಿಚಾರಣೆಗಳು ಸೇರಿದಂತೆ ಒಟ್ಟು 70,062 ಪ್ರಕರಣಗಳು ಬಾಕಿ ಉಳಿದಿವೆ. ಕಳೆದ ಆರು ತಿಂಗಳಲ್ಲಿ, ಪ್ರಕರಣಗಳ ಬಾಕಿಯು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದರೂ ಬಾಕಿ ಪ್ರಕರಣಗಳ ಸಂಖ್ಯೆ 70,000 ಕ್ಕಿಂತ ಹೆಚ್ಚಿದೆ. ಸಂವಿಧಾನ ಪೀಠ ವಿಚಾರಣೆ ನಡೆಸಬೇಕಿರುವ ಪ್ರಕರಣಗಳ ಸಂಖ್ಯೆ ಜನವರಿಯಲ್ಲಿ 422 ಇದ್ದಿದ್ದು, ಜುಲೈನಲ್ಲಿ 492 ಕ್ಕೆ ಏರಿದೆ. ಕಾನೂನಿಗೆ ಸಂಬಂಧಿಸಿದ ವಿಷಯಗಳು ಸಂವಿಧಾನ ಪೀಠ ವಿಚಾರಣೆಯ ವಿಷಯಗಳಾಗಿವೆ.
ಬಾಕಿ ಉಳಿದಿರುವ ಇಷ್ಟು ದೊಡ್ಡ ಪ್ರಮಾಣದ ಪ್ರಕರಣಗಳ ಕುರಿತು ಈಟಿವಿ ಭಾರತನೊಂದಿಗೆ ಮಾತನಾಡಿದ ಸುಪ್ರೀಂ ಕೋರ್ಟ್ ವಕೀಲ ಆದಿತ್ಯ ಪರೋಲಿಯಾ, ದೇಶದ ಎಲ್ಲ ಭಾಗಗಳಿಂದ ಮತ್ತು ಪ್ರತಿಯೊಂದು ನ್ಯಾಯಾಲಯದ ಪ್ರಕರಣಗಳು ಸುಪ್ರೀಂ ಕೋರ್ಟ್‌ಗೆ ಬರುತ್ತವೆ. ಪ್ರತಿಯೊಬ್ಬರೂ ಸುಪ್ರೀಂ ಕೋರ್ಟ್‌ಗೆ ಬರಲು ಬಯಸುತ್ತಾರೆ. ಪ್ರತಿದಿನ ಹೆಚ್ಚಿನ ಸಂಖ್ಯೆಯ ಹೊಸ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಮತ್ತು ಪ್ರತಿ ಪ್ರಕರಣದ ವಿಚಾರಣೆಗೆ ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡುವ ಮಾರ್ಗವಾಗಿ ಪರ್ಯಾಯ ವಿವಾದ ಪರಿಹಾರ (ಎಡಿಆರ್) ವಿಧಾನದ ಬಗ್ಗೆ ಆಗಾಗ್ಗೆ ಹೇಳುತ್ತಿರುತ್ತಾರೆ. ಆದರೆ ಭಾರತದ ಜನ ಮಾತುಕತೆ ನಡೆಸಲು ಸಿದ್ಧರಿಲ್ಲ ಮತ್ತು ಅವರು ನ್ಯಾಯಾಲಯಕ್ಕೇ ಹೋಗಲು ಬಯಸುತ್ತಾರೆ. ಹೀಗಾಗಿ ಎಡಿಆರ್ ವಿಧಾನ ಭಾರತದಲ್ಲಿ ಹೆಚ್ಚು ಪರಿಣಾಮಕಾರಿಯಾಗದಿರಬಹುದು ಎಂದು ಪರೋಲಿಯಾ ಹೇಳಿದರು.