ನವದೆಹಲಿ:ದೇಶದ ವಿರುದ್ಧ ಸುಳ್ಳು ಸುದ್ದಿ ಹರಡಿದ ಯೂಟ್ಯೂಬ್ ಚಾನೆಲ್ಗಳು, ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ವಿವಿಧ 60 ಕ್ಕೂ ಅಧಿಕ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶದಲ್ಲಿ ತಮಗಿರುವ ವಾಕ್ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡು ದೇಶದ ವಿರುದ್ಧವೇ ಸುಳ್ಳು ಸುದ್ದಿ ಹರಡಿದ ಸೋಷಿಯಲ್ ಮೀಡಿಯಾಗಳ ಖಾತೆಗಳನ್ನು ನಿಷೇಧಿಸಲಾಗಿದೆ. ನಿರ್ಬಂಧಗೊಂಡ ಯೂಟ್ಯೂಬ್ ಚಾನೆಲ್ಗಳು ಪಾಕಿಸ್ತಾನದ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತಿತ್ತು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಎಲ್.ಮುರುಗನ್ ರಾಜ್ಯಸಭೆಗೆ ತಿಳಿಸಿದರು.
ಸುದ್ದಿ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಬಗ್ಗೆ ಸರ್ಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪತ್ರಿಕೆಗಳು, ಮಾಧ್ಯಮಗಳು ಸ್ವಾಯತ್ತ, ಶಾಸನಬದ್ಧ ಸಂಸ್ಥೆಯಾದ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಡಿ ಕಾರ್ಯನಿರ್ವಹಿಸುತ್ತವೆ. ಪತ್ರಕರ್ತರ ನೀತಿ ಸಂಹಿತೆ ಆ ಸಂಸ್ಥೆ ವಿಚಾರಿಸುತ್ತದೆ ಎಂದು ತಿಳಿಸಿದರು.