ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ತಮಿಳು ಬ್ರಾಹ್ಮಣ ಯುವಕ(Tamil Brahmin bachelors)ರಿಗೆ ಸಂಗಾತಿ ಹುಡುಕುವುದೇ ಕಷ್ಟವಾಗಿದೆ. ಹೀಗಾಗಿ ಬಾಳ ಸಂಗಾತಿಗೋಸ್ಕರ ಬೇರೆ ಬೇರೆ ರಾಜ್ಯಗಳ ಮೊರೆ ಹೋಗುತ್ತಿದ್ದಾರೆ. ಜೊತೆಗೆ ತಮಿಳುನಾಡು ಬ್ರಾಹ್ಮಣ ಸಂಘ ಉತ್ತರ ಪ್ರದೇಶ, ಬಿಹಾರದಲ್ಲಿ ತಮ್ಮ ಸಮುದಾಯಕ್ಕೆ ಸೇರಿರುವ ಸೂಕ್ತ ಜೋಡಿ ಹುಡುಕಾಟಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತಮಿಳುನಾಡು ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್. ನಾರಾಯಣನ್(Brahmin Association president), ನಮ್ಮ ಸಮುದಾಯದ ಪರವಾಗಿ ಬಿಹಾರದಲ್ಲೂ ವಿಶೇಷ ಅಭಿಯಾನ ಆರಂಭಿಸಿದ್ದೇವೆ ಎಂದಿದ್ದಾರೆ. ನಾರಾಯಣನ್ ಅವರು ತಿಳಿಸಿರುವ ಪ್ರಕಾರ ರಾಜ್ಯದಲ್ಲಿ 30-40 ವಯಸ್ಸಿನ 40 ಸಾವಿರಕ್ಕೂ ಹೆಚ್ಚು ತಮಿಳು ಬ್ರಾಹ್ಮಣ ಯುವಕರಿಗೆ ಸಂಗಾತಿ(ವಧು) ಸಿಗುತ್ತಿಲ್ಲ. ರಾಜ್ಯದಲ್ಲಿ ಮದುವೆಯಾಗುವ 10 ಹುಡುಗರಿಗೆ ಕೇವಲ ಆರು ಹುಡುಗಿಯರು ಲಭ್ಯವಾಗ್ತಿದ್ದಾರೆ. ಹೀಗಾಗಿ ವಧುವಿಗೋಸ್ಕರ ಬೇರೆ ರಾಜ್ಯದ ಮೊರೆ ಹೋಗ್ತಿದ್ದೇವೆ. ದೆಹಲಿ, ಲಖನೌ, ಪಾಟ್ನಾದಲ್ಲಿ ಇದಕ್ಕಾಗಿ ಸಂಯೋಜಕರ ನೇಮಕ ಮಾಡಲಾಗುವುದು ಎಂದು ತಿಳಿಸಿರುವ ಅಧ್ಯಕ್ಷರು, ನಮ್ಮ ನಿರ್ಧಾರಕ್ಕೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.