ಕರ್ನಾಟಕ

karnataka

ETV Bharat / bharat

2019 -2021ರ ನಡುವೆ ದೇಶದಲ್ಲಿ 35,000ಕ್ಕೂ ಹೆಚ್ಚು ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ನಾರಾಯಣಸ್ವಾಮಿ

2019 ಮತ್ತು 2021ರ ನಡುವೆ ದೇಶದಲ್ಲಿ 35,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲೋಕಸಭೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಬ್ಬಯ್ಯ ನಾರಾಯಣಸ್ವಾಮಿ ಮಂಗಳವಾರ ಮಾಹಿತಿ ನೀಡಿದ್ದಾರೆ.

ಆತ್ಮಹತ್ಯೆ ಪ್ರಕರಣ
ಆತ್ಮಹತ್ಯೆ ಪ್ರಕರಣ

By PTI

Published : Dec 6, 2023, 6:36 AM IST

ನವದೆಹಲಿ: 2019 ಮತ್ತು 2021ರ ನಡುವೆ ದೇಶದಲ್ಲಿ 35,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲೋಕಸಭೆಗೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಬ್ಬಯ್ಯ ನಾರಾಯಣಸ್ವಾಮಿ ಮಂಗಳವಾರ ಮಾಹಿತಿ ನೀಡಿದ್ದಾರೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಅಬ್ಬಯ್ಯ ನಾರಾಯಣಸ್ವಾಮಿ ಅವರು ಸಾಮಾಜಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ವಿದ್ಯಾರ್ಥಿಗಳ ಸಂಖ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಡೇಟಾ ಹಂಚಿಕೊಂಡಿದ್ದಾರೆ. ಸಾಮಾಜಿಕ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ ಎಂದು ನಾರಾಯಣಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಅಂಕಿ - ಅಂಶಗಳ ಪ್ರಕಾರ, ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ 2019 ರಲ್ಲಿ 10,335 ರಿಂದ 2020 ರಲ್ಲಿ 12,526 ಮತ್ತು 2021 ರಲ್ಲಿ 13,089 ಕ್ಕೆ ಏರಿಕೆಯಾಗಿದೆ. ಸಾಮಾಜಿಕ ತಾರತಮ್ಯ ತಡೆಗೆ ಕೈಗೊಂಡ ಕ್ರಮಗಳ ಕುರಿತು ನಾರಾಯಣಸ್ವಾಮಿ ಮಾತನಾಡಿ, ಆತ್ಮಹತ್ಯೆಗಳನ್ನು ತಡೆಯಲು ಉನ್ನತ ಶಿಕ್ಷಣ ಇಲಾಖೆ ಕೌನ್ಸೆಲಿಂಗ್ ಸೆಲ್‌ಗಳನ್ನು ಸ್ಥಾಪಿಸಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಕೋಶಗಳು, ಸಮಾನ ಅವಕಾಶ ಕೋಶಗಳು, ವಿದ್ಯಾರ್ಥಿಗಳ ಕುಂದುಕೊರತೆ ಕೋಶಗಳು, ವಿದ್ಯಾರ್ಥಿಗಳ ಕುಂದುಕೊರತೆ ಸಮಿತಿ ಮತ್ತು ಸಂಪರ್ಕ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಹೇಳಿದ್ದಾರೆ.

ಇದಲ್ಲದೇ ಅಸ್ಪೃಶ್ಯತೆ ಆಚರಣೆಯಿಂದ ಉಂಟಾಗುವ ಯಾವುದೇ ಅಂಗವೈಕಲ್ಯವನ್ನು ಜಾರಿಗೊಳಿಸಲು ಶಿಕ್ಷೆಯನ್ನು ಸೂಚಿಸುವ ನಾಗರಿಕ ಹಕ್ಕುಗಳ (ಪಿಸಿಆರ್) ಕಾಯಿದೆ, 1955 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989 ಜಾರಿಯಲ್ಲಿದೆ. ಎಸ್ಸಿ ಮತ್ತು ಎಸ್ಟಿಗಳ ವಿದ್ಯಾರ್ಥಿಗಳು ಸೇರಿದಂತೆ ಸದಸ್ಯರ ಮೇಲೆ ದೌರ್ಜನ್ಯದ ಅಪರಾಧಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಿಕ್ಕಿಂನಲ್ಲಿ ಆತ್ಮಹತ್ಯೆ ಪ್ರಮಾಣ ದೇಶದಲ್ಲೇ ಅತ್ಯಧಿಕ(ಗ್ಯಾಂಗ್ಟಾಕ್): ಸಿಕ್ಕಿಂನಲ್ಲಿ ಆತ್ಮಹತ್ಯೆ ಪ್ರಮಾಣವು ದೇಶದಲ್ಲೇ ಅತ್ಯಧಿಕವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ವರದಿಯಲ್ಲಿ ತಿಳಿಸಿದೆ.

2022ರಲ್ಲಿ ಸಿಕ್ಕಿಂನಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಆತ್ಮಹತ್ಯೆ ಪ್ರಕರಣಗಳ ಪ್ರಮಾಣವು 43.1 ಪ್ರತಿಶತ ದಾಖಲಾಗಿದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 42.8 ರಷ್ಟು, ಪುದುಚೇರಿ 29.7 ರಷ್ಟು, ಕೇರಳ 28.5 ರಷ್ಟು ಮತ್ತು ಛತ್ತೀಸ್‌ಗಢದಲ್ಲಿ 28.2 ಶೇಕಡಾ ಆತ್ಮಹತ್ಯೆ ಮಾಡಿಕೊಂಡಿರುವುದು ದಾಖಲಾಗಿದೆ. 2022 ರಲ್ಲಿ ದೇಶದಲ್ಲಿ ಒಟ್ಟು 1,70,924 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ರಾಷ್ಟ್ರೀಯ ಸರಾಸರಿ ದರವು 12.4 ಪ್ರತಿಶತದಷ್ಟಿದೆ ಎಂದು ವರದಿಯಲ್ಲಿ ತಿಳಿಸಿದೆ.

ಸಿಕ್ಕಿಂನಲ್ಲಿ 2022 ರಲ್ಲಿ 293 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. 2021ಕ್ಕಿಂತ ಆತ್ಮಹತ್ಯೆ ದರದಲ್ಲಿ ಶೇಕಡಾ 10.2 ರಷ್ಟು ಏರಿಕೆಯಾಗಿದೆ. ಸಿಕ್ಕಿಂನಲ್ಲಿ 2022 ರ ಪ್ರಕಾರ ಒಟ್ಟು 226 ಪುರುಷರು ಮತ್ತು 67 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆತ್ಮಹತ್ಯೆಗೆ ನಿರುದ್ಯೋಗ ಪ್ರಮುಖ ಕಾರಣ:ರಾಜ್ಯದಲ್ಲಿ ಆತ್ಮಹತ್ಯೆಗೆ ಪ್ರಮುಖ ಕಾರಣ ನಿರುದ್ಯೋಗವಾಗಿದೆ. ನಿರುದ್ಯೋಗದಿಂದ ಬೇಸತ್ತು ಆರ್ಥಿಕ ಸಮಸ್ಯೆ ಸುಳಿಯಲ್ಲಿ ಸಿಲುಕಿ ಹಾಗೂ ಸಮಾಜದಲ್ಲಿ ಅವಮಾನ ಸಹಿಸಲಾಗದಿದ್ದರಿಂದ ಆತ್ಯಹತ್ಯೆಗೆ ಶರಣಾಗಿರುವ ಪ್ರಕರಣಗಳು ಜಾಸ್ತಿಯಾಗಿವೆ. ಕೌಟುಂಬಿಕ ಸಮಸ್ಯೆ,ಮಾದಕ ವ್ಯಸನ,ಮದ್ಯ ವ್ಯಸನ, ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆ ಪ್ರಕರಗಳು ನಡೆದಿವೆ ಎಂದು ತಿಳಿಸಿದೆ.

2011 ರ ಜನಗಣತಿಯ ಪ್ರಕಾರ, ಸಿಕ್ಕಿಂನ ಜನಸಂಖ್ಯೆಯು 6.10 ಲಕ್ಷಕ್ಕಿಂತ ಹೆಚ್ಚು ಇದೆ. ಹಿಂದಿನ ಎರಡು ವರ್ಷಗಳಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು. ಆದರೆ, ಇತ್ತೀಚೆಗೆ ಸಿಕ್ಕಿಂನಲ್ಲಿ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿರುವದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂಓದಿ:ಕರ್ನಾಟಕದಲ್ಲಿ ಅಪರಾಧ ಪ್ರಕರಣ ಹೆಚ್ಚಳ: ಕಳೆದ ವರ್ಷ 1,404 ಮಂದಿ ಕೊಲೆ

ABOUT THE AUTHOR

...view details