ಹರಿದ್ವಾರ (ಉತ್ತರಾಖಂಡ): ಕೋವಿಡ್ ಸಾಂಕ್ರಾಮಿಕ ಉಲ್ಬಣಗೊಂಡಿರುವ ಈ ಸಂದರ್ಭದಲ್ಲಿ ಕುಂಭಮೇಳ ನಡೆಯುತ್ತಿದೆ. ನಿನ್ನೆ ಹರಿದ್ವಾರದ ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಒಟ್ಟು 35 ಲಕ್ಷ ಭಕ್ತರು ಎರಡನೇ 'ಶಾಹಿ ಸ್ನಾನ' ಮಾಡಿದ್ದಾರೆ.
ಮಹಾಶಿವರಾತ್ರಿಯ ಪ್ರಯುಕ್ತ ಮಾರ್ಚ್ 11 ರಂದು ಮೊದಲ ಶಾಹಿ ಸ್ನಾನ ನಡೆದಿದ್ದು, ಎರಡನೆಯದು ಸೋಮವಾರ ಜರುಗಿತು. ನಿನ್ನೆ ಒಂದೇ ದಿನ 35 ಲಕ್ಷ ಭಕ್ತರು ಪವಿತ್ರ ಸ್ನಾನ ಮಾಡಿರುವುದಾಗಿ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಮಾಹಿತಿ ನೀಡಿದರು.
ಮಹಾದೇವ ಶಿವ ಗಂಗೆಯನ್ನ ಧರೆಗೆ ಇಳಿಸಿದ್ದ. ಹೀಗಾಗಿ ಗಂಗಾ ಸ್ನಾನ ಮಾಡುವುದು ತುಂಬಾ ಪವಿತ್ರ. ಗಂಗೆಯಲ್ಲಿ ಮಿಂದೆದ್ದರೆ ಎಲ್ಲಾ ಪಾಪಗಳಿಂದಲೂ ಮುಕ್ತಿ ಸಿಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಹೀಗಾಗಿ ಕುಂಭಮೇಳ, ಶಿವರಾತ್ರಿ ಸಂದರ್ಭದಲ್ಲಿ ಜನರು ಗಂಗಾ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.