ನವದೆಹಲಿ:2013-14ರಿಂದ 2022-23ರವರೆಗಿನ ಒಂಬತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ. ಬಡತನದಿಂದ ಹೊರಬಂದಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ಮುಂಚೂಣಿಯಲ್ಲಿವೆ ಎಂದು ನೀತಿ ಆಯೋಗ ವರದಿ ಹೇಳುತ್ತದೆ.
ಬಹುಆಯಾಮದ ಬಡತನ ಎಂದರೇನು?: ಬಹುಆಯಾಮದ ಬಡತನವನ್ನು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ ಸುಧಾರಣೆಯಿಂದ ಅಳೆಯಲಾಗುತ್ತದೆ. ನೀತಿ ಆಯೋಗದ ವರದಿಯನುಸಾರ, ದೇಶದಲ್ಲಿ ಬಹುಆಯಾಮದ ಬಡತನವು 2013-14ರಲ್ಲಿ ಶೇಕಡಾ 29.17ರಿಂದ 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ. ಬಹುಆಯಾಮದ ಬಡತನವು 12 ಸುಸ್ಥಿರ ಅಭಿವೃದ್ಧಿ ಗುರಿಗಳು ಒಳಗೊಂಡಿರುವ ಸೂಚಕಗಳನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಪೌಷ್ಟಿಕತೆ, ಮಕ್ಕಳು ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣ, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿವೆ.