ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂದು ಭಾರಿ ಅವಘಡವೊಂದು ಸಂಭವಿಸಿದೆ. ದೇವಸ್ಥಾನದಲ್ಲಿ ಮೆಟ್ಟಿಲುಬಾವಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರ ಪರಿಣಾಮ ಮೂವರು ಮಹಿಳೆಯರು ಸೇರಿ ಐವರು ದುರ್ಮರಣ ಹೊಂದಿದ್ದಾರೆ. ಈಗಾಗಲೇ 10 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಇದನ್ನೂ ಓದಿ:ಠಾಣೆಯಲ್ಲಿದ್ದ ಹನುಮ: 27 ವರ್ಷಗಳ ನಂತರ ದೇವಸ್ಥಾನದಲ್ಲಿ ದೇವರ ವಿಗ್ರಹ ಮರು ಪ್ರತಿಷ್ಠಾಪನೆ
ಇಲ್ಲಿನ ಪಟೇಲ್ ನಗರ ಪ್ರದೇಶದ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿ ರಾಮ ನವಮಿ ಆಚರಣೆ ವೇಳೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಈ ಘಟನೆ ಸಂಭವಿಸಿದಾಗ ದೇವಸ್ಥಾನದಲ್ಲಿ ಹವನದ ಸಮಯದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20ಕ್ಕೂ ಹೆಚ್ಚು ಜನರು ಒಳಗಡೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಷಯ ತಿಳಿದ ತಕ್ಷಣವೇ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಾವಿಯೊಳಗೆ ಸಿಲುಕಿದ್ದ ಭಕ್ತರನ್ನು ಸ್ಥಳೀಯರ ನೆರವಿನಿಂದ ರಕ್ಷಿಸುವ ಕಾರ್ಯಾಚರಣೆ ನಡೆದಿದೆ. ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಕೂಡ ಧಾವಿಸಿದ್ದಾರೆ.
ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆ: ಈ ಘಟನೆ ಕುರಿತು ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆ ಬಿಡುಗಡೆ ಮಾಡಿದ್ದು, ಸಿಎಂ ಚೌಹಾಣ್ ಶಿವರಾಜ್ ಸಿಂಗ್ ಚೌಹಾಣ್ ಘಟನೆಯ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇಂದೋರ್ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಅವರೊಂದಿಗೆ ದೂರವಾಣಿಯಲ್ಲಿ ಸಿಎಂ ಚರ್ಚಿಸಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಸೂಚನೆ ನೀಡಿದ್ದಾರೆ. ಇದಲ್ಲದೇ ಮುಖ್ಯಮಂತ್ರಿಗಳ ಕಚೇರಿ ಇಂದೋರ್ ಜಿಲ್ಲಾಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.