ಕಠ್ಮಂಡು/ನವದೆಹಲಿ:ಕಳೆದ ಕೆಲವು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಜಡಿಮಳೆಗೆ ಮಹಾಕಾಳಿ ನದಿ ತುಂಬಿ ಹರಿಯುತ್ತಿದೆ. ಪರಿಣಾಮ, ಉಂಟಾದ ಮಹಾ ಪ್ರವಾಹಕ್ಕೆ ಭಾರತ ಮತ್ತು ನೇಪಾಳ ಜನರು ತತ್ತರಿಸಿದ್ದಾರೆ.
ಈ ವಾರದಲ್ಲಿ ಭಾರತದಲ್ಲಿ 88ಕ್ಕೂ ಹೆಚ್ಚು ಮತ್ತು ನೇಪಾಳದಲ್ಲಿ 104ಕ್ಕೂ ಹೆಚ್ಚು ಜನರು ಸೇರಿ ಒಟ್ಟು 190ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ.
ು ಭಾರತ-ನೇಪಾಳದಲ್ಲಿ ಮಳೆ ಅಬ್ಬರಿಸಿದ ಪರಿಣಾಮ ಪ್ರವಾಹದಲ್ಲಿ ಸಿಲುಕಿ ನೇಪಾಳದಲ್ಲಿ 40ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹೀಗೆ ನಾಪತ್ತೆಯಾದವರು ಪ್ರವಾಹದ ಕೆಸರು ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಹೆಚ್ಚಿನ ಸಾವು-ನೋವುಗಳು ನೇಪಾಳದ ಪೂರ್ವ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಸಂಭವಿಸಿದ್ದು, ಈ ವಾರ ಭಾರೀ ಮಳೆಯಾಗಿದೆ ಎಂದು ಅಲ್ಲಿನ ಪೊಲೀಸ್ ವಕ್ತಾರ ಬಸಂತ ಬಹದ್ದೂರ್ ಕುನ್ವಾರ್ ಹೇಳಿದ್ದಾರೆ.
ನೇಪಾಳದಲ್ಲಿ ಮಹಾಕಾಳಿ ನದಿ ಉಕ್ಕಿ ಹರಿಯುತ್ತಿದೆ. ಈ ನದಿಯ ಪ್ರವಾಹದಿಂದಾಗಿ ಕೆಲ ಗ್ರಾಮಗಳು ನೀರು-ಕೆಸರಿನಿಂದ ಆವೃತವಾಗಿದ್ದು, ನೂರಾರು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಅನೇಕರು ಗಾಯಗೊಂಡಿದ್ದಾರೆ. ಹೆಲಿಕಾಪ್ಟರ್‌ಗಳ ಮೂಲಕ ಗಾಯಾಳುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಪಡೆಗಳು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ನೇಪಾಳ ಹಾಗೂ ಭಾರತದ ಉತ್ತರ ಭಾಗದ ಅನೇಕ ಪ್ರದೇಶಗಳು ಗುಡ್ಡ ಪ್ರದೇಶಗಳಿಂದ ಕೂಡಿದ್ದು ಮಳೆಗಾಲದಲ್ಲಿ ಪ್ರವಾಹ-ಭೂ ಕುಸಿತದಂತಹ ಸಮಸ್ಯೆಗಳು ಸಾಮಾನ್ಯ. ಭಾರತದ ಉತ್ತರ ಭಾಗದಲ್ಲಿ ಈ ವಾರ ಭಾರೀ ಮಳೆ ಅಪಾರ ಹಾನಿ ಉಂಟುಮಾಡಿದೆ. ಕನಿಷ್ಠ 88 ಜನರು ಮಳೆಗೆ ಸಾವನ್ನಪ್ಪಿದ್ದಾರೆ. ರಸ್ತೆ, ಸೇತುವೆ ಹಾಗು ಅನೇಕ ಮನೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ.
ರೆಡ್ ಕ್ರಾಸ್ ತಂಡಗಳು ಕೂಡಾ ಭಾರತ ಮತ್ತು ನೇಪಾಳ ಎರಡರಲ್ಲೂ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಯತ್ನ ಮಾಡುತ್ತಿವೆ. ಸ್ಥಳಾಂತರಗೊಂಡ ಕುಟುಂಬಗಳ ಸಂಖ್ಯೆ ಮತ್ತು ಅನಾಹುತಗಳಿಂದ ಉಂಟಾದ ಹಾನಿಯ ಸಂಪೂರ್ಣ ಪ್ರಮಾಣವನ್ನು ಕಂಡುಹಿಡಿಯಲು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವಾರಾಂತ್ಯದ ವೇಳೆಗೆ ಹವಾಮಾನ ಸುಧಾರಿಸುವ ನಿರೀಕ್ಷೆಯಲ್ಲಿ ಉಭಯ ದೇಶಗಳಿವೆ.