ನವದೆಹಲಿ:ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ 10 ವರ್ಷಗಳಲ್ಲಿ ದೇಶದಲ್ಲಿ 17 ಲಕ್ಷಕ್ಕೂ ಹೆಚ್ಚು ಜನರು ಹೆಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಕೇಳಲಾದ ಆರ್ಟಿಐ ಪ್ರಶ್ನೆಗೆ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಈ ಮಾಹಿತಿ ನೀಡಿದೆ.
ಅಸುರಕ್ಷಿತ ಲೈಂಗಿಕತೆಯಿಂದ 2011-12 ರಲ್ಲಿ 2.4 ಲಕ್ಷ ಜನರಿಗೆ ಹೆಚ್‌ಐವಿ ಹರಡಿದ್ದರೆ, 2020- 21ರ ಒಂದೇ ವರ್ಷದಲ್ಲಿ 85,268 ಮಂದಿಗೆ ಕಾಯಿಲೆ ತಾಕಿದೆ. ಇದರ ನಡುವೆ 2011 ರಿಂದ 2021 ರ 10 ವರ್ಷಗಳ ನಡುವೆ ದೇಶದಲ್ಲಿ 17,08,777 ಜನರು ಅಸುರಕ್ಷಿತ ಲೈಂಗಿಕತೆಯಿಂದಾಗಿ ಹೆಚ್‌ಐವಿ ಸೋಂಕಿನಿಂದ ಬಾಧಿತರಾಗಿದ್ದಾರೆ.
ಆಂಧ್ರಪ್ರದೇಶದಲ್ಲಿ ಹೆಚ್ಚು ಕೇಸ್:ರಾಜ್ಯಗಳ ಪೈಕಿ ಆಂಧ್ರಪ್ರದೇಶದಲ್ಲಿ 3,18,814 ಹೆಚ್‌ಐವಿ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಇನ್ನು ಮಹಾರಾಷ್ಟ್ರದಲ್ಲಿ 2,84,577, ಕರ್ನಾಟಕದಲ್ಲಿ 2,12,982, ತಮಿಳುನಾಡಿನಲ್ಲಿ 1,16,536, ಉತ್ತರ ಪ್ರದೇಶದಲ್ಲಿ 1,10,911 ಮತ್ತು ಗುಜರಾತ್ 87,440 ಪ್ರಕರಣಗಳು ಕಂಡುಬಂದಿವೆ. ಇದರಲ್ಲಿ ರಕ್ತ ಮತ್ತು ರಕ್ತದ ಉತ್ಪನ್ನಗಳ ಮೂಲಕ 15,782 ಜನರಿಗೆ ಹೆಚ್ಐವಿಯಾದರೆ, ತಾಯಿಯಿಂದ ಮಗುವಿಗೆ ಹರಡುವ ವಾಹಕದಿಂದ 4,423 ಜನರು ಕಾಯಿಲೆಗೆ ತುತ್ತಾಗಿದ್ದಾರೆ. 2020 ರ ಹೊತ್ತಿಗೆ ದೇಶದಲ್ಲಿ 81,430 ಮಕ್ಕಳು ಸೇರಿದಂತೆ 23,18,737 ಜನರು ಹೆಚ್‌ಐವಿ ಬಾಧಿತರಾಗಿದ್ದಾರೆ.
ರಕ್ತ, ವೀರ್ಯ ಅಥವಾ ಯೋನಿ ದ್ರವಗಳ ಸಂಪರ್ಕದ ಮೂಲಕ ವ್ಯಕ್ತಿಗೆ ವೈರಸ್ ಹರಡಬಹುದು. ಸೋಂಕಿನ ತಾಕಿದ ಕೆಲವೇ ವಾರಗಳಲ್ಲಿ ಜ್ವರ, ಗಂಟಲು ನೋವು ಮತ್ತು ಆಯಾಸದ ಜೊತೆಗೆ ಜ್ವರದ ಲಕ್ಷಣಗಳು ಕಂಡುಬರುತ್ತವೆ. ಇದು ಏಡ್ಸ್ ಆಗಿ ಮಾರ್ಪಾಡಾಗುವವರೆಗೂ ಸಾಮಾನ್ಯವಾಗಿ ಲಕ್ಷಣರಹಿತವಾಗಿರುತ್ತದೆ. ಏಡ್ಸ್ ಆಗಿ ಪರಿವರ್ತಿತವಾದ ನಂತರ ತೂಕ ನಷ್ಟ, ಜ್ವರ ಅಥವಾ ರಾತ್ರಿ ಬೆವರುವಿಕೆ, ಆಯಾಸ ಉಂಟಾಗುತ್ತದೆ. ಹೆಚ್ಐವಿಗೆ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದಾಗ್ಯೂ, ಸರಿಯಾದ ವೈದ್ಯಕೀಯ ಆರೈಕೆಯೊಂದಿಗೆ ಇದನ್ನು ನಿರ್ವಹಿಸಬಹುದು.
ಇದನ್ನೂ ಓದಿ:ಚೀನಾ ವಿರುದ್ಧ ತಿರುಗಿಬಿದ್ದ ಭಾರತ: ಚೀನಾ ನಾಗರಿಕರ ಪ್ರವಾಸಿ ವೀಸಾ ಅಮಾನತು