ನವದೆಹಲಿ:ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ದಾಳಿ ಇಂದಿಗೆ 10ನೇ ದಿನಕ್ಕೆ ತಲುಪಿದೆ. ಉಕ್ರೇನ್ನ ದೊಡ್ಡ ನಗರಗಳಿಗೆ ಲಗ್ಗೆ ಇಡುತ್ತಿರುವ ರಷ್ಯಾ ಸೇನೆ ಉಕ್ರೇನ್ ಮೇಲೆ ಭೀಕರ ದಾಳಿ ಮುಂದುವರಿಸಿದೆ. ಈ ಭಯಂಕರ ದಾಳಿ ನಡುವೆ ಭಾರತ 11,000 ಕ್ಕೂ ಹೆಚ್ಚು ಭಾರತೀಯರನ್ನು ಸಂಘರ್ಷ ಪೀಡಿತ ದೇಶದಿಂದ ಭಾರತಕ್ಕೆ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಶನಿವಾರ ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್‌ನಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುಮಾರು 170 ನಾಗರಿಕರನ್ನು ಸಚಿವರು ಬರಮಾಡಿಕೊಂಡರು. ಬಳಿಕ ಈ ಸಂಬಂಧ ಟ್ವೀಟ್ ಮಾಡಿರುವ ಮುರಳೀಧರನ್, "ಆಪರೇಷನ್ ಗಂಗಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದುವರೆಗೆ ಸುಮಾರು 11,000 ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸಲಾಗಿದೆ. 170 ಭಾರತೀಯರನ್ನ ಹೊತ್ತ ಮತ್ತೊಂದು ವಿಮಾನ ಇಂದು ನವದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಸಂತಸ ತಂದಿದೆ ಎಂದಿದ್ದಾರೆ.