ನವದೆಹಲಿ: ಬಿಜೆಪಿ ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲಿ ದ್ವೇಷದ ರಾಜಕಾರಣ ನಿಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ 100ಕ್ಕೂ ಅಧಿಕ ಮಾಜಿ ಅಧಿಕಾರಿಗಳು ಪತ್ರ ಬರೆದು, ಮನವಿ ಮಾಡಿದ್ದಾರೆ. ದೇಶದಲ್ಲಿ ದ್ವೇಷ ತುಂಬಿದ ರಾಜಕಾರಣವನ್ನು ನಾವು ನೋಡುತ್ತಿದ್ದೇವೆ. ಅಲ್ಲಿ ಅಲ್ಪಸಂಖ್ಯಾತ ಸಮುದಾಯ ಮಾತ್ರವಲ್ಲ ಇತರ ಸಮುದಾಯದವರೂ ಕೂಡಾ ಭಯದಲ್ಲಿ ಬದುಕು ನಡೆಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಮಾಜಿ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಧಾನ ಕಾರ್ಯದರ್ಶಿ ಟಿಕೆ ಎ ನಾಯರ್ ಸೇರಿದಂತೆ 108 ಮಂದಿ ಪತ್ರಕ್ಕೆ ಸಹಿ ಹಾಕಿದ್ದಾರೆ.