ಹೈದರಾಬಾದ್:"ಒಂದು ದೇಶ ಒಂದು ಚುನಾವಣೆ, ಚುನಾವಣಾ ಆಯೋಗದ ಕಾಯ್ದೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಇಂಡಿಯಾ ಕೂಟ ಗೆಲ್ಲಿಸುವುದು"..ತೆಲಂಗಾಣದಲ್ಲಿ ನಡೆದ 2 ದಿನಗಳ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಕೈಗೊಂಡ ಮಹತ್ವದ ನಿರ್ಧಾರಗಳಿವು.
ಐಎನ್ಡಿಐಎ ಕೂಟದ ಪ್ರಮುಖ ಪಕ್ಷವಾಗಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿ ನೇತೃತ್ವದ ಎನ್ಡಿಎ ಕೂಟವನ್ನು ಸೋಲಿಸುವ ಶಪಥ ಮಾಡಿದೆ. ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಹಾತ್ಮ ಗಾಂಧಿ ಅವರ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷತೆಯ ಶತಮಾನೋತ್ಸವಕ್ಕೆ ಗೌರವ ಸಲ್ಲಿಸಬೇಕು ಎಂದು ನಿರ್ಣಯ ತೆಗೆದುಕೊಂಡಿದೆ.
ಈ ಬಗ್ಗೆ ಸಿಡಬ್ಲ್ಯೂಸಿ ಸಭೆಯ ಎರಡನೇ ದಿನದಂದು ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ತಮ್ಮ ಪಕ್ಷದ ಗುರಿಯಾಗಿದೆ. ಇದು ಪಕ್ಷಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವದ ಉಳಿವಿನ ಹೋರಾಟವಾಗಿದೆ. 2024ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ಮಹಾತ್ಮ ಗಾಂಧಿ ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ ಎಂದು ಅವರು ಹೇಳಿದರು.
ಒಂದೇ ಸಲ ಚುನಾವಣೆಗೆ ವಿರೋಧ:ಕೇಂದ್ರ ಸರ್ಕಾರ ಏಕಕಾಲಕ್ಕೆ ಚುನಾವಣೆ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ತಮ್ಮ ಅಜೆಂಡಾಕ್ಕಾಗಿ ಎಲ್ಲ ಸಂಪ್ರದಾಯಗಳನ್ನು ಮುರಿಯುತ್ತಿದೆ. ಸರ್ಕಾರ ಅರ್ಥವಿಲ್ಲದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಹೆಸರುವಾಸಿ ಎಂದು ಅವರು ಟೀಕಿಸಿದರು.
ಸಂವಿಧಾನಕ್ಕೆ ಅಡಿಪಾಯ ಹಾಕಿದ ಪಕ್ಷ ನಮ್ಮದು. ಸಂವಿಧಾನದ ರಕ್ಷಣೆ ನಮ್ಮ ಕರ್ತವ್ಯ ಮತ್ತು ಕೊನೆಯ ಉಸಿರು ಇರುವವರೆಗೂ ನಾವು ಹೋರಾಡಬೇಕು. 2024 ರ ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿಯಾಗಬೇಕು. ದೇಶದಲ್ಲಿ ಇಂಡಿಯಾ ಕೂಟದ ಸರ್ಕಾರ ರಚಿಸಲು ಶ್ರದ್ಧೆಯಿಂದ ಕೆಲಸ ಮಾಡಿ ಎಂದು ಖರ್ಗೆ ಸಲಹೆ ನೀಡಿದರು.
ಲೋಕಸಭೆ ಚುನಾವಣೆಗೂ ಮುನ್ನ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಈ ವರ್ಷದ ಕೊನೆಯಲ್ಲಿ ನಡೆಯಲಿವೆ. ಈ ಎಲ್ಲಾ ರಾಜ್ಯಗಳಲ್ಲಿ ಮತ್ತು ಜಮ್ಮು ಕಾಶ್ಮೀರದಲ್ಲಿ ಸಂಭವನೀಯ ವಿಧಾನಸಭಾ ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧವಾಗಿರಬೇಕು. ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಮರು ಸ್ಥಾಪಿಸಬೇಕು. ಎರಡೂ ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯದ ಹೊಸ ಮಾದರಿಯನ್ನು ರೂಪಿಸಿವೆ. ಇದನ್ನು ದೇಶಾದ್ಯಂತ ಪ್ರಚಾರ ಮಾಡಬೇಕು ಎಂದು ಖರ್ಗೆ ಹೇಳಿದರು.
ಇದನ್ನೂ ಓದಿ:ಯಶೋಭೂಮಿಯಲ್ಲಿ 13 ಸಾವಿರ ಕೋಟಿ ವೆಚ್ಚದ ಪಿಎಂ ವಿಶ್ವಕರ್ಮ ಯೋಜನೆಗೆ ಪ್ರಧಾನಿ ಮೋದಿ ಚಾಲನೆ