ನವದೆಹಲಿ: ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಟೀಕಾ ಪ್ರಹಾರ ಮಾಡಿದ್ದಾರೆ. ನಮ್ಮನ್ನು ಹೆದರಿಸುವ ಮತ್ತು ಅವಮಾನಿಸುವ ಮೂಲಕ ಅವರು (ಬಿಜೆಪಿಯವರು) ನಮ್ಮ ಧ್ವನಿ ಅಡಗಿಸಲು ಭಾವಿಸುತ್ತಾರೆಯೇ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವ ಕ್ರಮವನ್ನು ಖಂಡಿಸಿ ದೆಹಲಿಯ ರಾಜ್ಘಾಟ್ನಲ್ಲಿ ಕಾಂಗ್ರೆಸ್ ವತಿಯಿಂದ ಸಂಕಲ್ಪ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕಾ ಗಾಂಧಿ, ನಮ್ಮನ್ನು ಹೆದರಿಸುವ ಮತ್ತು ಅವಮಾನಿಸುವ ಮೂಲಕ ನಮ್ಮ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಇಲ್ಲಿ ಕೇಳಿ, ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಸಾರ್ವಜನಿಕರ ಕಷ್ಟಪಟ್ಟು ದುಡಿದ ಹಣವನ್ನು ಲೂಟಿ ಮಾಡಿ ಕೆಲವೇ ಜನರಿಗೆ ಸೇರದಂತೆ ನಾವು ನೋಡಿಕೊಳ್ಳುತ್ತೇನೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ನಮ್ಮಲ್ಲಿ ದ್ವೇಷದ ಸಿದ್ಧಾಂತವಿಲ್ಲ- ಪ್ರಿಯಾಂಕಾ ಗಾಂಧಿ: ಈ ದೇಶದ ಪ್ರಜಾಪ್ರಭುತ್ವವನ್ನು ತಮ್ಮ ರಕ್ತದಿಂದ ಪೋಷಿಸಿದವರು ನಮ್ಮ ಕುಟುಂಬದವರು. ನನ್ನ ಸಹೋದರ (ರಾಹುಲ್ ಗಾಂಧಿ) ಪ್ರಧಾನಿ ಮೋದಿಯವರ ಬಳಿಗೆ ಹೋಗಿ ಅವರನ್ನು ಸಂಸತ್ತಿನಲ್ಲಿ ಅಪ್ಪಿಕೊಂಡರು. ನಿಮ್ಮ ಬಗ್ಗೆ ಯಾವುದೇ ದ್ವೇಷವಿಲ್ಲ ಎಂದು ಹೇಳಿದರು. ನಾವು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರಬಹುದು. ಆದರೆ, ನಮ್ಮಲ್ಲಿ ದ್ವೇಷದ ಸಿದ್ಧಾಂತವಿಲ್ಲ ಎಂದು ಹೇಳಿದರು.
ನೀವು (ಬಿಜೆಪಿಯವರು) 'ಪರಿವಾರವಾದ' ಬಗ್ಗೆ ಮಾತನಾಡುತ್ತೀರಿ, ಭಗವಾನ್ ರಾಮ ಯಾರು ಎಂದು ನಾನು ಕೇಳಲು ಬಯಸುತ್ತೇನೆ. ರಾಮನನ್ನು ವನವಾಸಕ್ಕೆ ಕಳುಹಿಸಲಾಯಿತು. ತನ್ನ ಕುಟುಂಬ, ಈ ಭೂಮಿಗಾಗಿ ತಮ್ಮ ಕರ್ತವ್ಯ ನಿರ್ವಹಿಸಿದ ರಾಮ 'ಪರಿವಾರವಾದಿ' ಆಗಿದ್ದಾರೋ ಅಥವಾ ಪಾಂಡವರು ತಮ್ಮ ಕುಟುಂಬದ ಸಂಸ್ಕೃತಿಗಾಗಿ ಹೋರಾಡಿದ ಕಾರಣಕ್ಕಾಗಿ 'ಪರಿವಾರವಾದಿ' ಆಗಿದ್ದರೋ?, ನಮ್ಮ ಕುಟುಂಬದ ಸದಸ್ಯರು ದೇಶದ ಜನರಿಗಾಗಿ ಹೋರಾಡಿದ ಕಾರಣಕ್ಕಾಗಿ ನಾವು ನಾಚಿಕೆಪಡಬೇಕೇ ಎಂದು ಪ್ರಿಯಾಂಕಾ ಪ್ರಶ್ನಿಸಿದರು.