ನವದೆಹಲಿ: ಬ್ರಿಟನ್ಗೆ ಹೋಗಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುತ್ತಿರುವ ರಾಹುಲ್ ಗಾಂಧಿ ಕ್ರಮಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಹುಲ್ ಗಾಂಧಿ ಸಂಪೂರ್ಣವಾಗಿ ಮಾವೋವಾದಿ ಚಿಂತನೆಗಳ ಹಿಡಿತದಲ್ಲಿದ್ದಾರೆ ಎಂಬುದು ಅವರ ಮಾತುಗಳಿಂದ ಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ರಾಹುಲ್ ಗಾಂಧಿಯವರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿ ಮತ್ತು ನಾಚಿಕೆಗೇಡಿನದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಕಾಂಗ್ರೆಸ್‌ನ ಚುನಾಯಿತ ಅಧ್ಯಕ್ಷರು ಎಂದು ನೀವು ಭಾವಿಸಿದರೆ ನಾವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳುತ್ತೇವೆ- ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಲು ಅಮೆರಿಕ ಮತ್ತು ಯುರೋಪ್ ಮಧ್ಯಪ್ರವೇಶಿಸಬೇಕು ಎಂಬ ರಾಹುಲ್ ಗಾಂಧಿಯವರ ಬೇಜವಾಬ್ದಾರಿ ಮತ್ತು ನಾಚಿಕೆಗೇಡಿನ ಹೇಳಿಕೆಯನ್ನು ನೀವು ಬೆಂಬಲಿಸುತ್ತೀರಾ? ರಾಹುಲ್ ಗಾಂಧಿಯವರ ಹೇಳಿಕೆಯನ್ನು ನೀವು ಬೆಂಬಲಿಸದಿದ್ದರೆ ಅದನ್ನು ತಿರಸ್ಕರಿಸಿ ಎಂದು ರವಿಶಂಕರ್ ಪ್ರಸಾದ್ ಸವಾಲು ಹಾಕಿದರು.
ಸೋನಿಯಾಗಾಂಧಿಗೆ ಬಿಜೆಪಿ ಪ್ರಶ್ನೆ: ಸೋನಿಯಾ ಗಾಂಧಿಯವರೆ, ನಿಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಬಿಜೆಪಿ ನಿಮ್ಮನ್ನು ಒತ್ತಾಯಿಸುತ್ತಿದೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಅಮೆರಿಕ ಮತ್ತು ಯುರೋಪ್ ಹಸ್ತಕ್ಷೇಪ ಮಾಡುವಂತೆ ಕೇಳಿದ ನಿಮ್ಮ ಮಗನ ಸಂಪೂರ್ಣ ಬೇಜವಾಬ್ದಾರಿ ಹೇಳಿಕೆಯನ್ನು ನೀವು ಎಷ್ಟರಮಟ್ಟಿಗೆ ಬೆಂಬಲಿಸುವಿರಿ ಎಂದು ಪ್ರಸಾದ್ ಪ್ರಶ್ನಿಸಿದರು. ಏತನ್ಮಧ್ಯೆ ಲೋಕಸಭೆಯ ವಿಶೇಷಾಧಿಕಾರ ಸಮಿತಿಯು ಮಾರ್ಚ್ 10 ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ತಪ್ಪುದಾರಿಗೆಳೆಯುವ, ಅವಹೇಳನಕಾರಿ, ಅಸಂಸದೀಯ ಮತ್ತು ದೋಷಾರೋಪಣೆಯ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಶೇಷ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಭಾರತೀಯ ಜನತಾ ಪಕ್ಷದ ಬೇಡಿಕೆಯನ್ನು ಆಲಿಸಲಿದೆ. ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮೇಲಿನ ದ್ವೇಷದ ಭರದಲ್ಲಿ ರಾಹುಲ್ ಗಾಂಧಿ ಎಲ್ಲ ಮಿತಿಗಳನ್ನು ಮೀರಿದ್ದಾರೆ ಎಂದರು.